Friday, June 5, 2009

ನುಡಿಸಲಾರೆನು ಮತ್ತೇರದೆ ಕೊಳಲು!



ನಿನ್ನ ಗೈರುವಿನಲ್ಲಿ ನಾನು ನಿಶ್ಚಲ ಬರಿ ತೊಟ್ಟಿಲು
ಉಟ್ಟುಡುಗೆಯ ತುಂಬ ಚಿತ್ತಾರದ ಮಧು ಬಟ್ಟಲು!

ಕೊಕ್ಕರೆಗೆ ಕಾಲು ಸೋತಿಲ್ಲ ನೀರಿನಿಂದ ಹೊರಬೀಳಲು
ಮೀನಿಗೊ ಮನಸಿಲ್ಲ ಕಾಡು ಕದ್ದು ಮುತ್ತಿಡಲು!

ಎಣ್ಣೆ ತುಪ್ಪ ಹಾಲು ಜೇನೆಲ್ಲ ನೆತ್ತಿಯಿಂದೆರೆಯಲು
ದೇವರು ಕೂಡ ನಾಲಗೆ ಚಾಚುತ್ತಿಲ್ಲ ರುಚಿ ನೋಡಲು!

ಕಳೆದಿರುಳಿನಿಂದ ನೀನಿಲ್ಲ ಸಾಕಿ ಮೊಗೆದು ಕೊಡಲು
ಮತ್ತೇಗೆ ನುಡಿಸುವುದು ಮತ್ತೇರದೆ ಕೊಳಲು!

ತಾರೆಗಳ ಆರಿಸಿದ ಜಿಪುಣ ದೇವರು!



ಎದೆ ತುಂಬ
ಹಣತೆ ಹಚ್ಚಿಟ್ಟೆ
ನಾಳೆಗೆ ನೀಲಿ ಆಕಾಶದಿ
ಆ ಜಿಪುಣ ದೇವರು
ತಾರೆಗಳ ಆರಿಸುವುದನರಿತು!
ಕದವಿಕ್ಕಿ ಗಾಳಿ ಬಚ್ಚಿಟ್ಟೆ
ಓ ಮಂದಾರ ಸ್ಪರ್ಷಿತ ದೂಳೆ
ಹಾಯುವುದಾದರೆ ಈ ಕಡೆ
ಸ್ವಲ್ಪ ಬೇಗನೆ ಹೊರಡುವುದೊಳಿತು
ಇಲ್ಲ ಅರಣ್ಯಗಳ ಸಾಮೂಹಿಕ ಹತ್ಯೆಗೆ
ಆಜ್ಞಾಪಿಸಬಹುದು
ಆ ಕೊಲೆಗಡುಕನಿನ್ನು !

Thursday, June 4, 2009

ಜಾರಿಬಿದ್ದಿದ್ದು ಯಾವ ದಿಕ್ಕಿಗಿ ಹೇಳು ಖರೆ !



ಹನಿ ಮುಡ್ಯಾವ ಖರೆ
ದನಿ ಕಾಡ್ಯಾವ ಖರೆ
ಆದ್ರ... ಈ ನಗಿಡ್ಯಾಗ ನೆಪ್ಪಾಗೊ
ಆ ಹಾಡು ಯಾರದು ಹೇಳು ಖರೆ!

ಹೂವು ದಿನಾ ಬಿಡ್ತಾವ ಖರೆ
ನೋಡೋರ ಕೈಮಾಡಿ ಕರಿತಾವ ಖರೆ
ಆದ್ರ... ಜಡಿಗೆ ಮುಡಿದಿದ್ದು
ಯಾರ ಹೆಸರಲೆ ಹೇಳು ಖರೆ!

ಹಕ್ಕಿ ತೆಲ್ಯಾವ ಖರೆ
ಮತ್ತ ಗೂಡಿಗೆ ಹೊಂಟಾವ ಖರೆ
ಆದ್ರ... ಎದಿವಳಗ ಬಚ್ಚಿಟ್ಟ
ಗುಟ್ಟು ಯಾರದು ಹೇಳು ಖರೆ !

ನೆನಪು ಬರ್ತಾವ ಖರೆ
ನಗು ಬರ್ಸ್ತಾವ ಖರೆ
ಆದ್ರ...ಜೀವ ಹಿಂಡಿದ್ದು
ಯಾರು ಹೇಳು ಖರೆ!

ದು:ಖ ಆಗ್ತಾದ ಖರೆ
ಅಳು ಉಕ್ಕಿ ಬರ್ತಾದ ಖರೆ
ಆದ್ರ...ಕಣ್ಣಾಗ ನಿಂತಾವ
ಚೆಲುವ ಯಾರು ಹೇಳು ಖರೆ!

ಕನಸು ಬಿಳ್ತಾವ ಖರೆ
ಎಲ್ಲೆಲ್ಲೊ ಹೊಯ್ತಾವ ಖರೆ
ಆದ್ರ... ನೀ ಕುಂತಿದ್ದು
ಯಾರ ಕುದರೆ ಮ್ಯಾಲ ಹೇಳು ಖರೆ!

ಚುಕ್ಕಿ ಹೊಳ್ದಾವ ಖರೆ
ಬೆಳಕ ತಳ್ದಾವ ಖರೆ
ಆದ್ರ...ನೀ ಜಾರಿ ಬಿದ್ದಿದ್ದು
ಯಾವ ದಿಕ್ಕಿಗಿ ಹೇಳು ಖರೆ!

ಅಪ್ರಕಟಿತ ವದಂತಿ


ಎದೆ ಪುಟದಲ್ಲಿ
ಸಣ್ಣ ವರದಿಯಷ್ಟಿದ್ದ
ನಮ್ಮ ಒಲವನು
ಮಡಚಿ ಕಸದ ಬುಟ್ಟಿಗೆ
ಎಸೆದದ್ದು ನಿನಗೂ ಗೊತ್ತು
ಖರೀದಿಗಿಟ್ಟಿಲ್ಲವಾದರು
ಕೇಳುವರು ಪ್ರತಿಯೊಬ್ಬರೂ
ಪ್ರತಿಗಳಿಗಾಗಿ ಪ್ರತಿದಿನ
ಸಿಕ್ಕಲ್ಲೆಲ್ಲ ಅದರದೇ ಸುದ್ದಿ
ನಿನ್ನ ಗೈರುವಿನಲ್ಲಿ
ಅದೊಂದು ಅಪ್ರಕಟಿತ
`ಅಪವಾದ' ಎಂದಿದ್ದೆನಷ್ಟೇ
ಆಶ್ಚರ್ಯವೆಂದರೆ ಅದೀಗ
ಸಿಕ್ಕ ಸಿಕ್ಕವರ ನಾಲಗೆಯಲಿ
ಅಕ್ಷರವಾಗಿ ; ಅದ್ಯಾವನೋ
ತಮಟೆಯಲಿ ಅಚ್ಚಾಗಿ
ಹೇಗೆ ಮುಸಿ-ಮುಸಿ ನಗುತಿದೆ ನೋಡು
ಮುಖಪುಟದಲ್ಲಿ ವದಂತಿಯಾಗಿ!

ಅ-ಕಾಲ ಮೊರೆ



ಕಾಲ ಜ್ಞಾಪಕಕ್ಕೆ
ನಕ್ಷತ್ರ ಜಾರಿದಂತೆ
ಎಲ್ಲಾ ವಸಂತಗಳು
ಮಣ್ಣು ಪಾಲಾದವು
ಎಂದು ಕೊಂಡವನು
ಭೂಮಿ ತುಟಿ ಸೀಳಿ
ಹೊರಬಂದ ಚಿಗುರು
ಆಕಾಶಕ್ಕೆ ಮುತ್ತಿಡುವುದನು
ಕಂಡು ಮತ್ತೆ ಹಿಂದಿರುಗಿದೆ
ಅವಳ ಚಳಿಗಾಲದ ಮನೆ ಹಿತ್ತಲಿಗೆ
ಇನ್ನೊಂದು ಸಂಜೆಗೆ
ಅಗ್ಗಷ್ಟಿಕೆಯೆದುರು
ಸ್ವಲ್ಪ ಜಾಗ ಕೇಳಿ!

* ** *



ಕಂಕುಳಲ್ಲಿ
ಗಂಟು ಹಿಡಿದು
ಕಾಡು ಪಾಲಾದ
ಓಣಿ ಮುದುಕಿ
ಗೊಣಗಿಕೊಳ್ಳುತ್ತಾ
ನಡೆದಂತೆ
ಮಾತನಾಡುವವನಿಗೆ
ಪ್ರಶ್ನೆ ಬರೆದುಕೊಟ್ಟು
ಹೊರಟೆ ಬಿಟ್ಟಿರಿ ನೀವು
ಪ್ರತಿ ಸಲ
ಹುಣ್ಣಿಮೆ ಹಿಂದಿನ ರಾತ್ರಿ
ಬಂದ ತಲೆ ನೋವು
ಹೋದದ್ದು ತಿಳಿಯದಂತೆ
ಹೋಗೆ ಬಿಟ್ಟಿರಲ್ಲ ನೀವು!

ಗುಟ್ಟಿನಿಂದ ಗುಲ್ ಮೊಹರ್ ಗೆ



ಮೈನೆರೆದ ಮೊಗ್ಗೊಂದು
ಚಳಿ ಕೊಡವಿ ಮೆಲ್ಲನೆ ಕಿಟಕಿಯಾಚೆಗೆ
ರಸ್ತೆ ಹುಡುಗರ ಕಂಡು ಕಣ್ಬಿಟ್ಟ ಮುಂಜಾವು
ನಡು ವಯಸ್ಸಿನ ನೀಲಿ
ಎಲೆ ಜಗಿದು ; ನೆಲಕುಗಿದ ಹೊತ್ತು
ಸಂಜೆ ಇಲ್ಲೇ ಅಂತೆ ಸೂರ್ಯನ ಸಾವು!

ಗುಬ್ಬಿ ಎದೆಯೊಳಗೆ ಹಾಡು ಕಟ್ಟಿದ ಗಳಿಗೆ
ಗುಟ್ಟಾಗಿ ಊರಾಚೆ ಸಂತೆಯಲ್ಲಿ
ನೆಗೆ-ನೆಗೆದು ಕುಣಿಯಿತು
ಗಿಡದ ಬುಡದಲ್ಲಿ ಕೆಂಪು ತುರುಬಿನ ಹುಂಜ!

ಗಗನ ಮರ ಹಂದರದಡಿ
ಗಾಳಿ ಲಾಲಿಗೆ ತಲೆದೂಗಿ
ಜೋಲಿಗೆಯಲೂ ನಗುವ ಮಗು ತಾನು
ಬಚ್ಚಿಡದ ಬಯಲು ತಾಯಿ
ಮುಟ್ಟೆಂದರೆ ನೆಲದ ಮರುಹುಟ್ಟುಯೆಂದ
ಮರುದಿನದ ನೋವು ಈ ಗುಲ್ ಮೊಹರ್ ಹೂವು!

ನೂರೆಂಟು ನಕ್ಷತ್ರ ಒಬ್ಬಂಟಿ ಆಕಾಶ



ಅವನ ಕೈಜಾರಿ ನೆಲ ಸೇರಿದ ಬಳಿಕ ಒಬ್ಬಂಟಿ ನಾನು
ವಂಚಕ ಒಬ್ಬಂಟಿತನದಲ್ಲು ಪ್ರಾಮಾಣಿಕ ಒಬ್ಬಂಟಿ ನಾನು

ಅನವಶ್ಯಕ ಯಾರ ಸಹಿ; ಮುದ್ರೆ ಕತ್ತಲೆಗೆ ಮತ್ತು ನಿದ್ರೆಗೆ
ಕನಸುಗಲೆದ್ದು ಹಾಸಿಗೆ ಮಡಚುವ ತನಕ ಒಬ್ಬಂಟಿ ನಾನು

ಹಸಿವು ನಗು ಮತ್ತು ಮೈಥುನ ಯಾರಪ್ಪಂದಿರ ಸ್ವತ್ತಲ್ಲ
ಈಗಷ್ಟೇ ಈ ಬಟ್ಟೆ ಬಡಿವಾರ ಬಿಸಿನೀರ ಜಳಕ ಒಬ್ಬಂಟಿ ನಾನು

ಮಲಗಿದವರ ಮಧ್ಯೆ ಎದ್ದು ಕಣ್ಬಿಟ್ಟೆ ಸುತ್ತಲೂ ಸುಡುಗಾಡು
ನಡು-ನಡುವೆ ಗೊರಕೆ ಮತ್ತೆ ಆಕಳಿಕೆ ಎದೆ ತುಂಬ ನಡುಕ ಒಬ್ಬಂಟಿ ನಾನು

ತೊಗಟೆ ರೆಪ್ಪೆಗಳ ಇಷ್ಟಿಷ್ಟೇ ಕಳಚಿ ಬಿಗಿದ ಭುವಿಯ
ತೋಳ ಸಡಲಿಸಿ ಆಕಾಶ ದಿಟ್ಟಿಸುವ ತವಕ ಒಬ್ಬಂಟಿ ನಾನು

ಗತವೆಲ್ಲ ಶವದ ಮಲ್ಲಿಗೆಯಂತಿದ್ದರೆ



ಯಾವ ಉರಿಯ ದೀಪದ ಬೆಳಗು
ಎಂಥ ಎದೆಗಳ ಸುದುವುದೋ ತಿಳಿಯದೆ
ನೀನು ಮಾತ್ರ ನೋಡಬಲ್ಲ
ಸ್ಥಿತಿಯಲ್ಲಿದ್ದ ನನ್ನನ್ನು
ಯಾರೋ ತಾಕಿದಂತೆನಿಸಿ
ನೆಲವಪ್ಪಿಕೊಂಡ ಮೊಂಬತ್ತಿ ಹೊತ್ತಿಸಿದೆ
ನಡುಗುವ ಜಾವದ ಚಳಿಗೆ
ನಗರದ ಕಾರ್ಖಾನೆ ಚಿಮಣಿ
ನಿನ್ನ ನೆನಪ ಹೋಗೆ ಹೊರಚೆಲ್ಲಿದಂತೆ
ಬಿದ್ದ ಶಾಪದ ಮಳೆ ಎದುರು
ದು:ಖದ ಬಿಕಾರಿಯಾದೆ
ಚಾಚಿದ ಬೊಗಸೆ ಬಟ್ಟಲು ತುಂಬ
ಅಂದುಕೊಂಡಂತೆ ನೀನು
ಬರಿ ಆಲಿಕಲ್ಲನೆ ಸುರಿದೆ ; ಆದರೆ
ನಾನಿಲ್ಲಿ ಮೌನದ ಅಬ್ಬರವನ್ನು
ಅನುಮಾನಿಸುತ್ತಲೇ ಬಾಡಿಗೆ ಮನೆ ಹಿಡಿದೆ !

ಹೀಗೆ ನನ್ನ ಸ್ಮೃತಿಪಟಲದಲ್ಲಿ
ನಿನ್ನ ಕಣ್ಣಿನ ಚಿತ್ರ ಉಳಿದುಬಿಟ್ಟಿದ್ದೆ ಬೇರೆ
ಜಗದ ನೂರು ಕಣ್ಣಿನ ಅಲ್ಬಂ ಅದನು
ಬರೆದುಕೊಂಡಿದ್ದೆ ಬೇರೆ !

ಯಾವುದು ಏನಾದರು
ಗಾಯವನ್ನು ಮತ್ತಷ್ಟು ಹಸಿಯಾಗಿಸುವಂತಿದ್ದರೆ
ನನಗೆ ಅಂಥ ನೆನಪುಗಳೇ ಬೇಡ
ಗತವೆಲ್ಲ ಗೋರಿಯೊಳಗಿನ
ಶವದ ಮಲ್ಲಿಗೆಯಂತಿದ್ದರೆ
ನನಗೆ ಅಂಥ ಸುವಾಸನೆಯೇ ಬೇಡ!

ಸಭ್ಯತೆಯ ಅರ್ಥ ಹುಡುಕಿ



ಸಭ್ಯರೊಳಗೆ
ಸಭ್ಯನಾಗಿ
ಸಭ್ಯತನವನು ಮೆರೆಯದ
ನಿನ್ನ ಸಭ್ಯತೆಯನು
ಯಾವನೋ ಅಸಭ್ಯ
"ಆಹಾ ..ಏನ್ ಸಭ್ಯತನ"
ಎಂದೊಡನೆ ಮತ್ತಷ್ಟು
ಕುಗ್ಗಿ ; ಕಿರಿದಾಗುವ
ನಿನ್ನ ಅಸಭ್ಯತನಕೆ
ಯಾವನೋ ಅಸಭ್ಯ
"ಛೆ ಏನ್ ಅಸಭ್ಯ ರೀ ಥೂ"
ಎಂದೊಡನೆ ಮತ್ತಷ್ಟು
ಅಸಭ್ಯನಾಗುವ
ನಿನ್ನ ಅಸಭ್ಯತನಕೆ
ಸಭ್ಯತೆಯ ಅರ್ಥವಾದರೂ ಏನು?

ಕಟ್ಟಿಸಲಾರೆನು




ಏ ಗೆಳತಿ
ಬಯಸದಿರು
ಮಂಜಿಲ್ ಮಹಲ್ ಗಳ
ಇಟ್ಟಿಗೆ ಸಿಗದ ಈ ತುಟ್ಟಿ
ಕಾಲದಲ್ಲಿ ಕಟ್ಟಿಸಲಾರೆನು
ಗೋರಿ ಗುಮ್ಮಟಗಳ
ಏಕೆಂದರೆ ಅಲ್ಲಿ ನನ್ನ ಜನತೆಗೆ ಇನ್ನು
ಜನತಾ ಮನೆ ಸಿಕ್ಕಿಲ್ಲ!

ಗೂಡಿನ ತುಂಬ ಚಂದ್ರ ಬಿಂಬ
ನಕ್ಷತ್ರ ಎದೆ ತುಂಬ
ಬೆಳದಿಂಗಳ ತಾಕುವ
ಇರಾದೆ ಇದ್ದರೆ ಇಳಿದು ಬಾ
ನನ್ನ ಮನದಾಳದ ಓಣಿಗಳಲಿ
ಗೋಣಿ ಚೀಲಗಳ ಹೊದ್ದ
ಆ ಮಾಂಸ ಮುದ್ದೆಗಳ ಕಂಡೂ
ಬರುವ ಬಯಕೆಯಿದ್ದರೆ
ಜೊತೆಗೊಂದಿಷ್ಟು ಕಣ್ಣೀರು ತಾ !