
ಹನಿ ಮುಡ್ಯಾವ ಖರೆ
ದನಿ ಕಾಡ್ಯಾವ ಖರೆ
ಆದ್ರ... ಈ ನಗಿಡ್ಯಾಗ ನೆಪ್ಪಾಗೊ
ಆ ಹಾಡು ಯಾರದು ಹೇಳು ಖರೆ!
ಹೂವು ದಿನಾ ಬಿಡ್ತಾವ ಖರೆ
ನೋಡೋರ ಕೈಮಾಡಿ ಕರಿತಾವ ಖರೆ
ಆದ್ರ... ಜಡಿಗೆ ಮುಡಿದಿದ್ದು
ಯಾರ ಹೆಸರಲೆ ಹೇಳು ಖರೆ!
ಹಕ್ಕಿ ತೆಲ್ಯಾವ ಖರೆ
ಮತ್ತ ಗೂಡಿಗೆ ಹೊಂಟಾವ ಖರೆ
ಆದ್ರ... ಎದಿವಳಗ ಬಚ್ಚಿಟ್ಟ
ಗುಟ್ಟು ಯಾರದು ಹೇಳು ಖರೆ !
ನೆನಪು ಬರ್ತಾವ ಖರೆ
ನಗು ಬರ್ಸ್ತಾವ ಖರೆ
ಆದ್ರ...ಜೀವ ಹಿಂಡಿದ್ದು
ಯಾರು ಹೇಳು ಖರೆ!
ದು:ಖ ಆಗ್ತಾದ ಖರೆ
ಅಳು ಉಕ್ಕಿ ಬರ್ತಾದ ಖರೆ
ಆದ್ರ...ಕಣ್ಣಾಗ ನಿಂತಾವ
ಚೆಲುವ ಯಾರು ಹೇಳು ಖರೆ!
ಕನಸು ಬಿಳ್ತಾವ ಖರೆ
ಎಲ್ಲೆಲ್ಲೊ ಹೊಯ್ತಾವ ಖರೆ
ಆದ್ರ... ನೀ ಕುಂತಿದ್ದು
ಯಾರ ಕುದರೆ ಮ್ಯಾಲ ಹೇಳು ಖರೆ!
ಚುಕ್ಕಿ ಹೊಳ್ದಾವ ಖರೆ
ಬೆಳಕ ತಳ್ದಾವ ಖರೆ
ಆದ್ರ...ನೀ ಜಾರಿ ಬಿದ್ದಿದ್ದು
ಯಾವ ದಿಕ್ಕಿಗಿ ಹೇಳು ಖರೆ!
No comments:
Post a Comment