Friday, July 17, 2009

ದುಃಖ ದಾಖಲಿಸುವವನೆ ಇದನ್ನು ಬರೆದಿಟ್ಟುಕೊ !


ಕಟಕಟೆಯ ಕಿತಾಬಿನ ಹಾಳೆ ನಿನ್ನವು
ಹಿಡಿದ ಲೇಖನಿಯ ಶಾಯಿಗೂ ನಿನ್ನ ರಕ್ತದ ಗುಣ
ಇನ್ನು ತೀರ್ಪು ನಿನ್ನಿಚ್ಚೆಯಂತೆ ಬರೆದುಕೊಂಡಲ್ಲಿ
ಪ್ರತಿ ಸಲ ನಾನೇಕೆ ಆಶ್ಚರ್ಯಪಡಲಿ
ತಮಾಷೆಯೆಂದರೆ ಇಷ್ಟು ಹೇಳಲೂ ನಿನಗೆ
ಭದ್ರತೆ ಬೇಕು; ನನಗೋ ತುಕ್ಕು ತಕ್ಕಡಿಯ ಕೆಳಗೆ
ಪುಕ್ಕಲು ಆಯಸ್ಕಾಂತದ ನೆನಪು!

ಅದಕ್ಕೆ ಸದಾ ಹಾಲುಗಲ್ಲದ ಮೇಲೆ ನಳಿಕೆಯಿಡುವ
ನಿನ್ನ ಆದೇಶಗಳು ಎಂದೋ ಖಚಿತಪಡಿಸಿವೆ
ನನ್ನ ನಗುವಿನೆಡೆಗಿನ ನಿನ್ನ ಅವಿರತ ಗುರಿ
ದುಃಖವನು ಬರಿ ಇಮ್ಮಡಿಗೊಳಿಸುವುದೆಂದು!

ನೀನು ಕಿರುಚುವಷ್ಟು ಸಾರಿಯೂ ಮುಂದುವರೆಸುತ್ತೇನೆ
ಕಪ್ಪು ಹಲಗೆಯ ಮೇಲೆ ಆಕಾಶ ಬರೆದಿದ್ದು ನಾನೇ ; ಮತ್ತು
ನನಗೆ ಗೊತ್ತಿರುವುದು ಬರಿ ನಿಜವೆಂಬುದನು!

ಮೈದಾನಗಳು ಧಿಕ್ಕರಿಸಿದವನ ಪಾಪದ ಹೆಸರು
ಕಡಲ ಅಲೆಗಳ ಮಾತು ಬಿಡು ಮೊದಲಿನಂತೆ
ಮರೆವಿನ ಖಯಾಲಿ ಅವಕ್ಕೆ; ಆದರೆ ಈ ಸಲ
ಜಗದ ಎಂಥ ಕಲ್ಲಿನ ಮೇಲಾದರೂ ಕೆತ್ತಿಸು
ಸಿಕ್ಕ ತುಫಾಕಿಯ ಮೇಲಿನ ಬೆರಳ ನಿಶಾನೆ
ಕೇವಲ ಮೂರುವರ್ಷದ ನನ್ನದೇ ಎಂದು!
____________________________________________________
ಇತ್ತೀಚಿಗೆ ಜಿಂಬಾಬೆ ರಕ್ಷಣಾ ಪಡೆಯಿಂದ ಅಕ್ರಮವಾಗಿ ಬಂಧಿಸಲ್ಪಟ್ಟ "ಮೆಂಬರ್ಸ್ ಫರ ಡೆಮೊಕ್ರಟಿಕ್ ಚೇಂಜ್ ಮಾನವ ಹಕ್ಕುಗಳ ಸಂಘಟನೆಯ ದಂಪತಿಗಳ ಮೂರು ವರ್ಷದ ಮಗು ನಿಜೆಲ್ ಮೂಟೆ ಮಗೌ ನನ್ನು ಅಲ್ಲಿಯ ನ್ಯಾಯಾಲಯ ಅಪರಾಧಿಯೆಂದು ಗಣಿಸಿ ಮೂರು ತಿಂಗಳು ಜೈಲು ವಾಸ ನೀಡಿತ್ತು. ಮತ್ತು ಇದೀಗ "ಪ್ರಪಂಚದ ಅತಿ ಕಿರಿಯ ಉಗ್ರಗಾಮಿ " ಎಂಬ ಹಣೆ ಪಟ್ಟಿ ಹಚ್ಚಿತ್ತು. ಆದರೆ ಶಿಕ್ಷಾವಧಿ ಮುಗಿಸಿ ಮನೆ ಸೇರಿದ್ದರೂ ಮಾನಸಿಕವಾಗಿ ಜರ್ಜರಿತವಾದ ಮಗು ಸಹಜ ಸ್ಥಿತಿಗೆ ಬಂದಿಲ್ಲ. ನಗುವುದಿಲ್ಲ, ಅಪರಿಚಿತರು ಬಂದರೆ ದಾವಿಸಿ ಅಮ್ಮನ ಹಿಂದೆ ಅಡಗಿಕೊಳ್ಳುವುದಾಗಿ ವರದಿಯಾಗಿದೆ.