Tuesday, February 22, 2011

ಕ್ಷಮೆ ಕೋರಿ




ಕಿಕ್ಕಿರಿದ ರಸ್ತೆಗೆ
ಆಕಾಶ ಹಾಸಿ
ತುಕ್ಕು ತೇರಿಗೆ ಚುಕ್ಕಿಗಳಂಟಿಸಿ
ಬೇವಿನ ಮರಕ್ಕೆ ಮಾವಿನ ಎಲೆ ಕಟ್ಟಿ
ಸಂಜೆ ದೇವರ ದರುಶನಕೆ
ಕರೆಯೋಲೆ ಕೊಟ್ಟು
ಬಂದ ಬರಿಗಾಲ ಬಸಯ್ಯರಿಗೆ
ರಥಬೀದಿ ನಿಷೇಧಯೆಂದವರ
ಓ ಆಕಾಶವೇ ಕ್ಷಮಿಸು

ನೀನು ಮಾತು ಕೊಟ್ಟಂತೆ ಸುರಿದ
ಎಲ್ಲ ಹನಿಗಳ ಮುತ್ತಾಗಿಸದೆ ಹೋದೆ
ಸೂಳೆ ಮಕ್ಕಳು ಕೂಡ
ಸುತ್ತ ಎದೆಗಾಯದ ಗಾದೆಗಳೆಂದು
ಕಪ್ಪೆಚಿಪ್ಪುವಿನಲಿ ಮೊಟ್ಟೆಗಳಾಗಿಟ್ಟುಕೊಂಡಿದ್ದೆ
ಪಾಪ ಅಮಾಯಕ ಬಾಲ ಏಸುಗಳು
ಸಮುದ್ರದ ಕಡೆಗಾಲ ಕುಡುಗೋಲಿನೇಟಿಗೆನಲು
ಕಾವು ಕೂಡ ತಗುಲದಂತೆ ಬಚ್ಚಿಟ್ಟುಕೊಂಡಿದ್ದೆ
ಓ ಕಡಲೆ ಕ್ಷಮಿಸು

ನಿನ್ನ ಮುನಿಸಿಗೆ ಸಾವುಗಳಿಲ್ಲಿ
ಸುಗ್ಗಿಯ ನಾಯಿಕೊಡೆ ಕರುಣೆಗೆ
ಅಲೆಯ ತುಟಿಯಾಗಿ ಪಾದಮುತ್ತಿಕ್ಕುವೆ
ನೆಲದ ದಿಮ್ಮನಿಸಿಯ ಮಾತು
ನಿನಗೂ ತಲುಪಲಿ

ಈಗ ಸ್ವಲ್ಪ ಮಳೆಯಾಗಲಿ
ನನಗೆ ಬಾಯಾರಿಕೆ.

Monday, February 14, 2011

ಚಳಿ ಅಂಕುಶಮಿಟ್ಟೋಡೆ ನೆನೆವುದೆನ್ನ ಮನಂ ರಾಯಚೂರು ಸೀಮೆಯುಂ...!




ಭಯ್ಯಾ..ಚಿಕೂ ಜ್ಯೂಸ್ ಹೈ?
ಬನಾನ ಹೈ.(ಮಾಡ್ಬೇಕು)
ಜಲ್ದಿ ಬನಾವೋ.
.................
ಏ ಲಿಜಿಯೇ
ಅರೆ! ಏ ಕ್ಯಾ ಹೈ?
ವಹಿ ಬನಾನ (banana-ಬಾಳೆ ಹಣ್ಣಿನ)ಜ್ಯೂಸ್ !!

ಇದು ನನ್ನ ದೆಹಲಿಯ ಮುಲಾಖಾತ್!

ಫಲವತ್ತಾದ ರಾಯಚೂರಿನ ಬಿಸಿಲ ಮಹಲ್ ನಲ್ಲಿ ಹುಟ್ಟಿದ ನನಗೆ ದೆಹಲಿಯೆಂಬ (ಸದ್ಯ) ಬಿಸಿಲ ಬರಗಾಲದ ಊರಲ್ಲಿ ಕೆಲಸ ಕುದುರಿದ್ದು ಅದೂ ವಿಮೆನ್ಸ್ ಕಾಲೇಜಿನಲ್ಲಿ. ಇಲ್ಲಿಯ ಜನ, ಭಾಷೆ ಮತ್ತವರ ಸ್ವಭಾವ ಅಲ್ಲದೆ ಆಹಾರ ಇತ್ಯಾದಿಗಳೆಲ್ಲವೂ ಭಿನ್ನವೇ ಸರಿ. ದಕ್ಷಿಣದಿಂದ ಬದುಕಿನ ದಂಡಯಾತ್ರೆಗೆ ಬರುವ ಕನ್ನಡಿಗರು ಸೇರಿದಂತೆ ತಮಿಳರು, ಮಲೆಯಾಳಿಗಳು, ತೆಲುಗರು ಇಲ್ಲಿಯವರಿಗೆ ಒಂದೇ ಬೀಡಿ ಫ್ಯಾಕ್ಟರಿಯ ಮದ್ರಾಸಿ ಬ್ರ್ಯಾಂಡುಗಳು.


ಮುಜುಗರವೆಂಬ ಆಜನ್ಮ ಕವಚ ಕುಂಡಲಧಾರಿಯಾದ ನಾನು ಕಮಲ ನೆಹರು ಕಾಲೇಜೆಂಬ (ಮಹಿಳೆಯರಿಗೆ ಮಾತ್ರ!) ವಿಮೆನ್ಸ್ ಕಾಲೇಜಿನ ಗೇಟೆಂಬ ರೈಲ್ವೆ ಹಳಿ ದಾಟುವಾಗ ಸ್ವಲ್ಪ ಅಳಕುತ್ತಲೇ ಒಳ ನಡೆದೆ. ಇನ್ನೇನು ಗಾರ್ಡ್ ರೂಮು ದಾಟಿ ಕಾಲೇಜಿನ ಮುಖ್ಯದ್ವಾರ ಪ್ರವೇಶಿಸಬೇಕು ಅನ್ನೋಷ್ಟರಲ್ಲಿ ಹಿಂದುಗಡೆಯಿಂದ "ಖಬರ್ದಾರ್ ಅಗರ್ ಅಂದರ್ ಗುಸ್ಸ್ನೇಕಿ ಹಿಮ್ಮತ್ ಕಿಯೇ ತೋ" ಎಂಬಂತೆ ರಾಣಾ ಎಂಬ ಗಿಡ್ಡನೆಯ ಆಕೃತಿಯೊಂದು ಬೆನ್ನಿಗೆ ಪಿಸ್ತೋಲ್ ಮಾದರಿಯಾಗಿ ಬಡಿಗೆವೊಂದನ್ನು ಹಿಡಿದು ಹ್ಯಾಂಡ್ಸ್-ಅಪ್ ಎಂದ. ಮೊದಲೇ ಅಲ್ಲಲ್ಲಿ ನಿಂತು ಹೇಗೆ ಎ(ಹೆ)ದುರಿಸಬೇಕು ಎಂದು ತಾಲೀಮು ಮಾಡಿಕೊಂಡು ಬಂದಿದ್ದ ನಾನು ಏಕ್-ದಂ ಜೇಮ್ಸ್-ಬಾಂಡ್ ತೆರನಾಗಿ ಉದ್ದೇಶ ಪೂರಕವಾಗಿ ಚಟೀರನೆ ಇಂಗ್ಲಿಷ್ನಲ್ಲಿ ಹಿಂಗಿಂಗೆ ಹಿಂಗಿಂಗೆ ಅಂತ ಗುಂಡು ಹೊಡೆದು "ಮೈ ಯಹಾ ಸರ್ಕಾರ್ ಕ ನಮಕ್ ಖಾನೆ ಆಯಾ ಹ್ಞೂ" ಎಂದೆ. ಅದಕ್ಕೆ ಆತ ಅಪಾದಮಸ್ತಕವಾಗಿ ಒಮ್ಮೆ ಸ್ಕ್ಯಾನ್ ಮಾಡಿ ಸ್ವಲ್ಪ ನಾಚಿ-ನೀರಾಗಿ "ಟೀಕ್ ಹೈ ಸರ್ ಆಪ್ ಜಾಯಿಯೇ" ಎಂದ. ಆರಂಭದ ತರಗತಿಗಳಲ್ಲಿ ನನ್ನ ಸ್ಥಿತಿ ಮತ್ತು ಗತಿ ಹೇಳತೀರದು. ನನ್ನ ಬ್ರೋಕನ್-ಹೈದರಾಬಾದಿ ಹಿಂದಿಯುಂ ಕಡಲೋಪಾದಿ ವಿದ್ಯಾರ್ಥಿನಿಯರ ನಗೆಯುಂ!


ಇಂಥ ಸ್ಥಿತಿಯಲ್ಲಿ ಮೂರು ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೊಂಥರ ಅ(ಹ)ವಮಾನವಾಗಿ ಪರಿಣಮಿಸಿ ನನ್ನ ಕಾಲ್ ಬೇರಿಲಿನ ಸಂದಿಯನ್ನು ಸೀಳಿ ಬಿಟ್ಟಿದ್ದು ಅಲ್ಲದೆ ಗೃಹ ದಿಗ್ಭಂದನ ಹಾಕಿತು. ಜೊತೆಗೆ ಜನವರಿ ಒಂದರಿಂದ ಟೀಚರ್-ಇನ್-ಇನ್ಚಾರ್ಜ್ ಎಂಬ ಅಧಿಕ ತಲೆ ನೋವು ಕೊಟ್ಟು ಗಹಗಹಿಸಿದ ನನ್ನ ಹಿರಿಯರು "ನಾಚ್ ಬಸಂತಿ ನಾಚ್' ಎಂಬಂತೆ ಉರುಳಾಡಿ ಆನಂದಿಸಿದ್ದು ಆಯಿತು.
ಚಳಿಯೆಂದರೆ ಬರೀ ಧಾರವಾದದಲ್ಲಿದ್ದು ಅನುಭವಿಸಿದ್ದ ನನಗೆ ಅಲ್ಲಿಯ 'ದೈಯಾಲ ಕೋಟ' ದಂತಹ ಕರ್ನಾಟಕ ಕಾಲೇಜು ಮತ್ತು ವಿಶ್ವವಿದ್ಯಾಲಯ ಹಂಚಿಕೊಳ್ಳಬಹುದಾದ ನೆನಪುಕೊಟ್ಟದ್ದು ನಿಜ.ಆದರೆ ಮೊನ್ನೆ ದೆಹಲಿ ಚಳಿ ಮಾತ್ರ ನಡುಗಿಸಿದ ಪರಿ ಅ-ಪೂರ್ವ, ಅನನುಭವ. ಕಳೆದ ಡಿಸೆಂಬರ್ ನಲ್ಲಿಯೇ ಮುಗಿಯ ಬೇಕಿದ್ದ ಪರೀಕ್ಷೆಗಳು ದೆಹಲಿ ವಿ.ವಿ.ಯ ವಿಜ್ಞಾನ ಶಿಕ್ಷಕರ ಸೆಮಿಸ್ಟರ್ ರದ್ಧತಿ ಮುಷ್ಕರದಿಂದಾಗಿ ಈಗ ನಡೆಯುತ್ತಿವೆ. ಬರೀ ಕೋಣೆ ತಪಾಸಣೆ ಇಲ್ಲ ಮೇಲ್ವಿಚಾರಣೆಗೆ ಬರುವವರಿಗೆ ನರನಾಡಿಯ ಬಿಗಿದು ಹಾಕುವ ಚಳಿಯ ಖದರ್ ತಿಳಿಯದು. ಪೆನ್ನು ಹಿಡಿದು ಉತ್ತರಗಳ ಕತ್ತರಿಸುವ ಅನುಭವ ವಿದ್ಯಾರ್ಥಿಗಳಿಗೆ. ಇಡಿ ದೇಹವನ್ನು ಉಣ್ಣೆ-ಸ್ವೆಟರ್ ಗಳಿಂದ ಬಿಗಿದುಕೊಂಡು ಬಂದು ಎಕ್ಸಾಮ್ ಹಾಲಿನಲ್ಲಿ ಕೈ-ಕವಚ ಕಳಚಿದೊಡನೆ ಬೆರಳುಗಳೆಲ್ಲ ಜೋಮು ಹಿಡಿದು 'ಮೆಮೊರಿ ಲಾಸ್' ಎಂಬ ಅನುಭವ ಆಗದೆ ಇರದು.


ಓದಿದ್ದರು ಇದನ್ನು ಓದಿಲ್ಲ ಎಂಬುದು ಸಿರಿಯಸ್ ಸಿನ್ಸಿಯರ್ ವಿದ್ಯರ್ಥಿಗಳದ್ದಾದರೆ ಇನ್ನು ಓದಿರದಿದ್ದರೂ ಪರೀಕ್ಷೆಗೆ ಅಷ್ಟೇ ಸಿರಿಯಸ್(!) ಆಗಿ ಪ್ರಿ-ಪೇರಾಗಿ ಬಂದಿದ್ದ ವಿದ್ಯಾರ್ಥಿನಿಯರ ಚೀಟಿ ಗಳೆಂಬ ಸಮಕಾಲಿನ ಸಣ್ಣ ಸಣ್ಣ ತಾಮ್ರ ಪಟದ ಮಾದರಿಯ ಶಿಲಾಶಾಸನಗಳೆನಾದರು ಸಿಗಬಹುದೇ; ಅವುಗಳ ರಚಿಯಿತರ ವಂಶಾವಳಿ ಏನಾದರು ಪತ್ತೆಯಾಗಬಹುದೇ ಎಂದು ಉತ್ಕನನ ಗೈದ ಕೆಲ ಲೇಡಿ-ಟೀಚರ್ಸ್ ಭೂತ-ಗನ್ನಡಿ ಹಿಡಿದು ಮಾಹಿತಿ ಹಕ್ಕು ಚಲಾಯಿಸಿದ್ದು ಇದೆ. ಇನ್ನು ಇಲ್ಲಿನ ಆಸಕ್ತಿಕರ ಸಾರ್ವಜನಿಕ ಸಂಗತಿಗಳಲ್ಲಿ ಬಸ್ಸು ಪ್ರಮುಖ . ಏಕೆಂದರೆ ಹೆಚ್ಚಾಗಿ ಇಲ್ಲಿ ನಾವು ಹೊರಡಬೇಕಾದ ಅಥವಾ ಇಳಿಯ ಬಯಸುವ ನಿಲ್ದಾಣದ ಬದಲಾಗಿ ಪ್ರಯಾಣದ ದರವನ್ನಾಧರಿಸಿ ಟಿಕೆಟ್ ಕೊಡುವುದು. "ಪಾಂಚ್ ಕ ದೋ" "ದಾಸ್ ಕ ತೀನ್ ದೋ .." ಎಂಬದು ಚಾಲ್ತಿಯಲ್ಲಿದೆ. ಹಾಗೆಯೇ ಕಂಡಕ್ಟರ್ ಮಹಾಶಯರು ಒಮ್ಮೆ ಬಸ್ ಹತ್ತಿ ತಮ್ಮ ಸೀಟಿಗೆ ಮೊಳೆ ಜಡಿದು ಕೊಂಡರೆಂದರೆ ಅಲ್ಲಿಂದ ಏಳುವುದೇ ಇಲ್ಲ. ಸ್ವತಃ ಪ್ರಯಾಣಿಕರು ಅವನಲ್ಲಿಗೆ ಹೋಗಿ ಮಲ್ಲ ಯುದ್ಧಮ್ ಗೈದು ಪಡೆದು ಕೊಳ್ಳಬೇಕು. ಇದರಲ್ಲಿ ಬಹಳ ಸಲ ಮುದುಕರು ಮತ್ತು ಮಹಿಳೆಯರು ಯುದ್ಧದಲ್ಲಿ ಶರಣಾಗಿ ನಿಲ್ದಾಣ ಬಂದೊಡನೆ ಇಳಿದು ಹೋಗೋದು ಸಹಜ.


ಕೆಲವೊಮ್ಮೆ ಹೀಗಾಗಿ ಬಿಡುತ್ತದೆ, ನಮ್ಮೂರ ಕಡೆ ಮಾರೆಮ್ಮನ ಗುಡಿಗೆ ಬಳಿಯುವ ಜಾಜಿ ಬಣ್ಣದಷ್ಟೇ ಮಂದವಾಗಿ ಲಿಪ್ಸ್ಟಿಕ್ ಮೆತ್ತುವ ಸಂಪ್ರದಾಯ ನೂಕು ನುಗ್ಗಲಿಗೆ ಅವರಿವರ ಬಟ್ಟೆಯ ಮೇಲೆ ಯಾರಯಾರದೋ ಅದರ ಲಾಂಛನವು ವೀರಾಜಮಾನವಾಗಿ ಮುದ್ರಿಸುವಂತೆ ಮಾಡಿಬಿಡುತ್ತದೆ. ಇದಕ್ಕೆ ಮೆಟ್ರೋ ಕೂಡ ಹೊರತಲ್ಲ. ಸ್ವಭಾವ ಸ್ವಲ್ಪ ರಾಯಳಸೀಮೆಯದು ಎನಿಸುವ 'ದುಡಿಯುವ ವರ್ಗ'ದ ಮಾತು ತೋಡ ಬಿರುಸಾದರು ಬಹು ಬೇಗ ಅತ್ಮಿಯರಾಗಿಬಿಡುತ್ತಾರೆ. ಇನ್ನು ಕಡ್ಡಾಯವಾಗಿ ನಗರಗಳಿಗೆ ಮಾತ್ರ ಎಂಬಂತೆ ಇಲ್ಲೂ ಕೂಡ ಚಿಲ್ಲರೆ ಜೇಬುಗಳ್ಳರು, ಸೂಟ್ ಕೇಸ್ ಕಳ್ಳರು ಇತ್ಯಾದಿ ಇದ್ದೆ ಇದ್ದಾರೆ. ಆಟೋ ರಿಕ್ಷಾ ಡ್ರೈವರ್ ಗಳ ಬಗ್ಗೆ ಒಳ್ಳೆ ಮಾತೆ ಇವೆ. ಆದರೆ ಪ್ರತಿ ಆಹಾರದಲ್ಲೂ ಆಲೂಗಡ್ಡೆಯನ್ನು ಉಪ್ಪು ಬಳಸಿದಂತೆಯೂ ಕೆಲವೊಮ್ಮೆ ನೀರು ಬಳಸಿದಂತೆಯೂ ಇರುವ ಇಲ್ಲಿನ ಅಡುಗೆ ಮಾತ್ರ ದಕ್ಷಿಣಾದಿಗಳಿಗೆ ರೊಂಬ ರೇಜಿಗೆ ತರದೇ ಇರದು. ಇನ್ನು ಕೊಂಚಂ ತೆಲುಗು; ಕೊಂಚಂ ತಮಿಳ್ ತಿಳಿದಿದ್ದರಂತೂ ಮಲ್ಲು ಹೋಟೆಲ್ ಸೇರಿದಂತೆ ತಮಿಳ್ ಕ್ಯಾಂಟೀನ್ ಗಳಲ್ಲಿ ಇಡ್ಲಿ ವಡೆ ಜೊತೆ ಸ್ವಲ್ಪ ಚಟ್ನಿ ಸಾಂಬಾರ್ ಅಧಿಕವಾಗಿ ದೊರಕುವುದು ಖಚಿತ.


'ಉಳ್ಳವರು ಉಲನ್ ಕೊಳ್ಳುವರಯ್ಯ, ಇಲ್ಲದವರು ನಾವೇನು ಕಮ್ಮಿ ಅಯ್ಯಾ, ಸೀರೆಯೇ ಸ್ವೆಟರ್; ಶಾಲೆ ಮಫ್ಲರ್' ಎಂದು ಚಳಿಯಿಂದ ರಕ್ಷಿಸಿಕೊಳ್ಳಲು ಫುಟ್-ಪಾತ್ ಗೆ ಬರುವ ಮಕ್ಕಳು ಲಾಲ್ ಬತ್ತಿ (ಟ್ರಾಫಿಕ್ ಸಿಗ್ನಲ್)ಗಳಲ್ಲಿ ಓಡಾಡುವ ವಾಹನಗಳ ವೇಗವನ್ನು ಲೆಕ್ಕಿಸದೆ ಚಿರಂಜಿವಿಗಳಂತೆ ಮಂಜನ್ನು ಭೇದಿಸಿ ಕಾರುಗಳ ಕಿಟಕಿಗಳಿಗೆ ಮುಖವಿಟ್ಟು ಬೇಡುವ ದೃಶ್ಯ ಕನ್ನಡಿಗಳನ್ನು ವೈಬರ್ ತೊಳೆದು ಹಾಕಿದಷ್ಟೇ ನಿಚ್ಚಳ.