
ಮೈನೆರೆದ ಮೊಗ್ಗೊಂದು
ಚಳಿ ಕೊಡವಿ ಮೆಲ್ಲನೆ ಕಿಟಕಿಯಾಚೆಗೆ
ರಸ್ತೆ ಹುಡುಗರ ಕಂಡು ಕಣ್ಬಿಟ್ಟ ಮುಂಜಾವು
ನಡು ವಯಸ್ಸಿನ ನೀಲಿ
ಎಲೆ ಜಗಿದು ; ನೆಲಕುಗಿದ ಹೊತ್ತು
ಸಂಜೆ ಇಲ್ಲೇ ಅಂತೆ ಸೂರ್ಯನ ಸಾವು!
ಗುಬ್ಬಿ ಎದೆಯೊಳಗೆ ಹಾಡು ಕಟ್ಟಿದ ಗಳಿಗೆ
ಗುಟ್ಟಾಗಿ ಊರಾಚೆ ಸಂತೆಯಲ್ಲಿ
ನೆಗೆ-ನೆಗೆದು ಕುಣಿಯಿತು
ಗಿಡದ ಬುಡದಲ್ಲಿ ಕೆಂಪು ತುರುಬಿನ ಹುಂಜ!
ಗಗನ ಮರ ಹಂದರದಡಿ
ಗಾಳಿ ಲಾಲಿಗೆ ತಲೆದೂಗಿ
ಜೋಲಿಗೆಯಲೂ ನಗುವ ಮಗು ತಾನು
ಬಚ್ಚಿಡದ ಬಯಲು ತಾಯಿ
ಮುಟ್ಟೆಂದರೆ ನೆಲದ ಮರುಹುಟ್ಟುಯೆಂದ
ಮರುದಿನದ ನೋವು ಈ ಗುಲ್ ಮೊಹರ್ ಹೂವು!
No comments:
Post a Comment