Sunday, November 20, 2011

ಮಹೂವಾ… ಮಹೂವಾ







ಮಹೂವಾ ಮಹೂವಾ
ಮಾಯದ ಮಹೂವಾ
ಮಹೂವಾ ಮಹೂವಾ
ಮಾಯವಾದೆ ಯಾಕವ್ವ

ಮುಗಿಲಾಗ ಹೂವಿನ ಬುಟ್ಟಿ
ನೆಲದಾಗ ಬಣ್ಣದ ಚಿಟ್ಟಿ
ಹಸಿದರೆ ಹೊಟ್ಟೆಗೆ ರೊಟ್ಟಿ
ದಾರಿಗೆ ನೆರಳನು ಕೊಟ್ಟಿ IIಮಹೂವಾ ಮಹೂವಾII

ಮೊಹ ಮಹುಲ ಇಲುಪ ಹಿಪ್ಪೆ
ಬಳಸದಿದ್ರೆ ಬಾಯಿ ಸಪ್ಪೆ
ಗುಡಿಸಲ ಜೇನು ತುಪ್ಪೆ
ಕರುವಿಗೆ ಹುಡಿ ಸೊಪ್ಪೆ IIಮಹೂವಾ ಮಹೂವಾII

ಗೊಂಡಮ್ಮ ಗಂಡನಿಗೆ
ಹುಳಿ ಹೆಂಡಮ್ಮ ನೀನು
ಕೊಯ ಕಂದಮ್ಮಗಳಿಗೆ
ಕೊಬ್ಬರಿಗೆ ಬೆಲ್ಲ ನೀನು IIಮಹೂವಾ ಮಹೂವಾII

ಸಂತಾಲ ಸುಂದರಿ ಜಡೆಗೆ
ಸಂತೆ ಹೂವಿನ ದಂಡೆ
ಸೋಲಿಗ ಸಿದ್ದಿಗಳಿಗೆ
ಸಾಬೂನು ಕೈ ಉಂಡೆ IIಮಹೂವಾ ಮಹೂವಾII

ಗಿಳಿ ಗುಬ್ಬಚ್ಚಿ ನಿನ್ನ
ಹಳೆ ಬಂಧುಗಳೇನೆ
ಬೆಳವ ಗೊರವಂಕ ನಿನ್ನ
ಮನೆ ಹಿರಿ ಮಕ್ಕಳೇನೆ IIಮಹೂವಾ ಮಹೂವಾII


ಇಂತಿಪ್ಪ ನಿನ್ನ ಬುಡಕೆ
ಕಾಯ್ದೆ ಕಾನೂನು ಯಾಕೆ
ಬೇರಿಗೆ ಹಗ್ಗವ ಕಟ್ಟಿ
ನೆಟ್ಟೋರ ಅಲ್ಲಿಂದ ಅಟ್ಟಿ IIಮಹೂವಾ ಮಹೂವಾII

ನವಿಲೇ ನೀ ನ್ಯಾಯ ಕೇಳೆ
ಇರುವೆ ನೀನೆಲ್ಲಿರುವೆ
ಕಾಗಕ್ಕ ಕಾರಣ ಕೇಳೆ
ಗೂಬೆ ನೀ ಮಾತಾಡೆ IIಮಹೂವಾ ಮಹೂವಾII


________________________________________________________________

ಟಿಪ್ಪಣಿ:
ನಮ್ಮ ದೇಶದ ಮಧ್ಯೆಪ್ರದೇಶ ಸೇರಿದಂತೆ ಮಹಾರಾಷ್ಟ್ರ,ಒರಿಸ್ಸಾ, ಚತ್ತೀಸ್ಗಡ, ಜಾರ್ಖಂಡ್ ಕಾಡಿನಲ್ಲಿ ಬೆಳೆವ ಈ ಹೂವು ಸಪೋಟಾಸಿಯೆ ಎಂಬ ಜಾತಿಗೆ ಸೇರಿದ್ದು, ವರ್ಷಕ್ಕೆ ೨೦ ರಿಂದ ೨೦೦ ಕೇಜಿ ಬೀಜ ಬಿಡುತ್ತದೆ. ಗಿರಿಜನ/ ಆದಿವಾಸಿಗಳ ಆಹಾರ ಪದಾರ್ಥವಾಗಿದ್ದು ಒಣಗಿದ ಹೂವನ್ನು ಸ್ಥಳೀಯ ಮದ್ಯ ತಯಾರಿಕೆಗೆ ಬಳಸುತ್ತಾರೆ. ಮತ್ತು ಇದರ ಇತರೆ ಭಾಗಗಳನ್ನು ಚಾಕಲೇಟ್, ಔಷಧಿ, ಸಾಬೂನು ಅಲ್ಲದೆ ಗೊಬ್ಬರ ತಯಾರಿಕೆಗೆ ಬಳಸುತ್ತಾರೆ . ನಿಸರ್ಗದಲ್ಲಿ ಉಚಿತವಾಗಿ ಲಭ್ಯಯಿರುವ ಈ ಮರದ ಉತ್ಪನ್ನಗಳ ಮೇಲೆ ಸರಕಾರ ನಿರ್ಬಂಧಗಳನ್ನು ಹೇರಿ ಗಿರಿಜನರ ಬದುಕುವ ಹಕ್ಕನ್ನೇ ಕಸಿಯುತ್ತಿದೆ. ಮಧ್ಯವರ್ತಿಗಳ ಹಾವಳಿಯಿಂದಾಗಿ ಸರಿಯಾದ ಬೆಲೆ ಸಿಗುತ್ತಿಲ್ಲ.

* ಮೊಹ, ಮಹಲ, ಇಲುಪ, ಹಿಪ್ಪೆ, ಇಪ್ಪೆ, ಪೂನಮ, ಮಹೂವಾದ ಇತರೆ ಹೆಸರು.
* ಗೊಂಡ, ಕೊಯ, ಸೋಲಿಗ, ಸಿದ್ದಿ ಮತ್ತು ಸಂತಾಲ ವಿವಿಧ ಬುಡಕಟ್ಟುಗಳು.