Friday, August 12, 2011

ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮಾ...: ಗದ್ದರ್



ರಕ್ಷಾ ಬಂಧನ, ಬಹುಶ: ರಕ್ತ ಸಂಬಂಧಯಿಲ್ಲದೆಯೂ ಒಂದು ಕಮ್ಮನೆಯ ಅಕ್ಕ-ತಂಗಿ, ಅಣ್ಣ-ತಮ್ಮ೦ದಿರ ಪ್ರೀತಿಯನ್ನು
ಎಂಥವರಿಗೂ ಮೊಗೆದು ಕೊಡಬಹುದಾದ ಹಬ್ಬ. ಮತ್ತು ರಾಖಿ ಹಬ್ಬದ ಕುರಿತು ಈಗಾಗಲೇ ಬೇರೆ ಬೇರೆ ಭಾಷಾ ಸಾಹಿತ್ಯದಲ್ಲಿ ಸಾಕಷ್ಟು ಬರೆಯಲಾಗಿದೆ. ಸಿನಿಮಾಗಳಲ್ಲಂತೂ ಎಕರೆಗಟ್ಟಲೆ ತೋರಿಸಲಾಗಿ ರಾಖಿ ಕಟ್ಟಿಸಿಕೊಂಡರೆ ಕಡ್ಡಾಯವಾಗಿ ಏನಾದರು ಗಿಫ್ಟ್ ಕೊಡಲೇಬೇಕೆಂಬ ಗೊತ್ತುವಳಿ ಒಂದು ಜಾರಿಯಾದಂತಿದೆ.

ಆದರೆ ದಶಕ ಹಿಂದೆ ತೆಲುಗುವಿನಲ್ಲಿ ಆರ್ ನಾರಾಯಣ ಮೂರ್ತಿ ನಿರ್ಮಿಸಿದ'ಓರಾಯ್ ರಿಕ್ಷಾ' ಸಿನಿಮಾಕ್ಕೆ ಗದ್ದರ್ ಬರೆದ 'ಮಲ್ಲೆ ತೀಗಕು ಪಂದಿರಿ ವೋಲೆ' ಹಾಡು ಎಂಥ ಅಧ್ಬುತವಾಗಿ ಮೂಡಿ ಬಂದಿದೆ ಎಂದರೆ ಇವತ್ತಿಗೂ ರಕ್ಷಾ ಬಂಧನ ದಿವಸ ಆ ಹಾಡನ್ನು ಪ್ರಾರ್ಥನೆ ಗೀತೆ ಎಂಬಂತೆ ಜನ ಮತ್ತೆ ಮತ್ತೆ ಕೇಳುತ್ತಾರೆ. ಒಬ್ಬ ಬಡ ರಿಕ್ಷಾ ತುಳಿಯುವ ಅಣ್ಣನ ನಿವೇದನೆ ಈ ಹಾಡು. ಜಾನಪದ ಸೊಗಡನ್ನು ಜನರ ಭಾಷೆಯಲ್ಲೇ ಹೆಣೆದು ಅವರನ್ನು ಎಚ್ಚರಗೊಳಿಸುವ ಅದೆಷ್ಟೋ ಗೀತೆ ರಚಿಸಿರುವ ಗದ್ದರ್ ಈ ಗೀತೆ ರಚನೆಗೆ ಆಂಧ್ರ ಪ್ರದೇಶದ ನಂದಿ ಅವಾರ್ಡ್ ಬಂದರು ಸ್ವೀಕರಿಸಲಿಲ್ಲ. ವಂದೇ ಮಾತರಂ ಶ್ರೀನಿವಾಸ್ ಹಾಡಿರುವ ಈ ಗೀತೆಯ ವಿಡಿಯೋ ಮತ್ತು ಅದರ ಭಾಷಾಂತರ ಇಲ್ಲಿದೆ.









ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮಾ...

__________________________________________________


ಮಲ್ಲಿಗೆ ಬಳ್ಳಿಗೆ ಹಂದರ ವೋಲೆ
ಮಬ್ಬುಗತ್ತಲಲ್ಲಿ ಬೆಳದಿಂಗಳ ವೋಲೆ
ನಿನ್ನ ಪಾದದ ಮೇಲೆ ಹುಟ್ಟು ಮಚ್ಚೆಯಾಗಿ ತಂಗ್ಯಮ್ಮ
ಒಡ ಹುಟ್ಟಿದ ಋಣ ತೀರಿಸುವೆನೆ ತಂಗ್ಯಮ್ಮ

ಮೈನೆರೆದ ಮರು ಘಳಿಗೆಯಿಂದಲೆ
ಹೆಣ್ಣುಮಗು ಮೇಲೆ ಏಸೊಂದು ಎಣಿಕೆ
ಕಾಣುವುದೆಲ್ಲ ನೋಡದಿರೆ೦ದರು
ನಗುವ ಮಾತಿಗೂ ನಗಬೇಡೆ೦ದರು

ಅಂಥ ಅಣ್ಣ ನಾನಾಗಲಾರೆ ತಂಗ್ಯಮ್ಮ
ನಿನ್ನ ಬಾಲ್ಯಕಾಲದ ಗೆಳೆಯನಮ್ಮ ತಂಗ್ಯಮ್ಮ
ಕಾಡಿನೊಳಗೆ ನವಿಲು ವೋಲೆ ತಂಗ್ಯಮ್ಮ
ಆಟ ಆಡಿಕೋ ಹಾಡು ಹಾಡಿಕೋ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ II

ಬಳಲಿ ಹೋಗಿ ನೀ ಕಳೆಗುಂದಿದ್ದರೆ
ಬೆನ್ನುಮೂಳೆ ಆಗಿ ಒಳ ಬಂದೆನಮ್ಮ
ಒಂದುಕ್ಷಣ ನೀ ಕಾಣದಿದ್ದರೆ
ನನ್ನ ಕಣ್ಣಾಲಿಗಳು ಕಮರಿ ಹೋದವು

ಒಂದು ಕ್ಷಣ ನೀ ಮಾತುಬಿಟ್ಟರೆ ತಂಗ್ಯಮ್ಮ
ನಾ ದಿಕ್ಕಿಲ್ಲದ ಹಕ್ಕಿಯಾದೇನೆ ತಂಗ್ಯಮ್ಮ
ತುತ್ತು ತಿನ್ನದೇ ಮುನಿಸಿಕೊಂಡರೆ ತಂಗ್ಯಮ್ಮ
ನನ್ನ ಭುಜಬಲವೇ ಬಿದ್ದು ಹೋದಿತೆ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ II

ಓದಿದಷ್ಟು ನಿನ್ನ ಓದಿಸ್ತೀನಮ್ಮ
ಬೆಳೆಯುವಷ್ಟು ನಿನ್ನ ಬೆಳೆಸ್ತೀನಮ್ಮ
ಜೋಡೊಂದು ಕೂಡೋ ಹೊತ್ತಿಗೆ
ಹೂವೋ ಎಲೆಯೋ ಜೋಡಿಸ್ತಿನಮ್ಮ

ಮೆಚ್ಚಿದವಗೆ ಕೊಡುವೆ ನಿನ್ನ ತಂಗ್ಯಮ್ಮ
ನನ್ನ ಕಣ್ಣೀರಿಂದ ಕಾಲು ತೊಳೆಯುವೆ ತಂಗ್ಯಮ್ಮ
ರಿಕ್ಷಾ ಗಾಡಿಯ ತೇರು ಮಾಡುವೆ ತಂಗ್ಯಮ್ಮ
ನಿನ್ನ ಅತ್ತೆಮನೆಗೆ ಹೊತ್ತೊಯ್ಯುವೆ ತಂಗ್ಯಮ್ಮ IIಮಲ್ಲಿಗೆ ಬಳ್ಳಿಗೆ ಹಂದರ ವೋಲೆ II

_____________________________________________________


ಕನ್ನಡಕ್ಕೆ : ರಮೇಶ ಅರೋಲಿ