Sunday, June 5, 2011


ತೆಲುಗು ಕಾವ್ಯ ಜಾತ್ರೆಯಲ್ಲಿ ಗೇಯರೂಪ ಕವಿತೆಯ ತೇರು ಎಳೆದು ಬಹುದೂರ ಹಾದಿ ಸವೆಸಿದ ರಚನಾಕಾರರಿದ್ದರೆ. ಆ ಹಾದಿ ತುಳಿದ ಅನೇಕ ಆಧುನಿಕ ಕವಿಗಳು ಇಲ್ಲಿದ್ದಾರೆ. ಇಂತಹ ಗೇಯ ಕವಿತೆಗೆ ಮರುಜನ್ಮ ಕೊಟ್ಟಿದ್ದು ಗದ್ದರ್. ಆದರೆ ಆ ಕೂಸನ್ನು ಎತ್ತಿ, ಆಡಿಸಿ-ಮುದ್ದಾಡುತ್ತಿರುವುದು ಗೋರಟಿ ವೆಂಕನ್ನ. ಮೂರು ದಶಕಗಳ ಕಾಲ ಕಾವ್ಯ ಕೃಷಿಯಲ್ಲಿ ತೊಡಗಿರುವ ವೆಂಕನ್ನನ ದನಿಗೆ ಹಳ್ಳಿಗಾಡಿನಲ್ಲಿ ಅಲ್ಲೆಲ್ಲೋ ಅಲೆಯುತ್ತಿರುವ ದಾಸಯ್ಯನ ಏಕನಾದದ ಗತ್ತಿದೆ. ಜಾಗತೀಕರಣದ ಕುಲುಮೆಯಲ್ಲಿ ನಲುಗುತ್ತಿರುವ ಗ್ರಾಮ ವೃತ್ತಿಗಳು, ಅಲ್ಲಿನ ಕರುಣಾಜನಕ ಬದುಕಿನ ಸ್ಥಿತಿಯೇ ಇವರ ಕಾವ್ಯದ ವಸ್ತು. ಪ್ರಕಟವಾದ ಸಂಕಲನಗಳು: 'ಏಕನಾದಂ', 'ರೇಲ ಪೂತಲು' ಮತ್ತು 'ಅಲ ಸೆಂದ್ರವಂಕ'. ೨೦೧೦ ರಲ್ಲಿ ಪ್ರಕಟವಾದ 'ಅಲ ಸೆಂದ್ರವಂಕ' ಸಂಕಲನದಿಂದ 'ವಾನೋಚ್ಚೆನಮ್ಮಾ' ಕವಿತೆಯ ಅನುವಾದ ಈ "ಮಳೆ ಬಂತಮ್ಮಾ.."

ಮಳೆ ಬಂತಮ್ಮಾ...

ಮಳೆ ಬಂತಮ್ಮಾ…

ಮಳೆ ಬಂತಮ್ಮಾ ನೆರೆ ಬಂತಮ್ಮಾ
ಮಳೆಯ ಜತೆಯಾಗಿ ತೊರೆ ಬಂತಮ್ಮಾ
ಮರದ ಹೆರಳ ಮೇಲೆ ಬೆರಳು ಬೆರಳಾಗಿ ಉದುರಿ
ದಡದ ಬಂಡೆ ಮೇಲೆ ಗಂಧದಿ ಹರಿದಿದೆ
ಕೊಟ್ಟಿಗೆಗಿಳಿದು ಕೊಳೆಯೆಲ್ಲ ತೊಳೆದು
ಕೋಳಿಹುಂಜ ತುರುಬು ನವಿರಾಗಿ ಸವರಿ
ಎಮ್ಮೆಕೋಣಗಳಿಗೆ ಗಮ್ಮತ್ತು ತಂದಿದೆ
ದನದ ಹಿಂಡನು ಕರೆದು ಕೆರೆಯಲ್ಲಿ ಅದ್ದೀದೆ IIಮಳೆ ಬಂತಮ್ಮಾ II

ಹದ್ದುಗೂಡಿನಲ್ಲಿ ಹುಲ್ಲನು ತೋಯಿಸಿ
ಗುಬ್ಬಿಗೂಡಿನ ಕಲ್ಲು ಹರಳನು ಸರಿಸಿದೆ
ಟಿಟ್ಟಿಭ ಗಂಟಲು ಸಿಹಿಯನು ಹೆಚ್ಚಿಸಿ
ಪಿಕಳಾರ ಮೂಗಿನ ಪಾಚಿಯ ತೊಳೆದಿದೆ
ಎತ್ತಿನ ಡುಬ್ಬವ ಮುದ್ದಾಡಿ ನಲಿದು
ನೇಗಿಲ ಒಡಲನು ತಣ್ಣಗೆ ಮಾಡಿದೆ IIಮಳೆ ಬಂತಮ್ಮಾ II

ಹೊಸ ನೀರಾಗಿ ಬಂದು ಹೊಂಡಾವ ಸೇರಿ
ಹಸಿರು ಪಾಚಿಯ ತುಕ್ಕು ಹಸನಾಗಿ ತೊಳೆದಿದೆ
ಮೀನಿಗೆನೋ ನೀರ ಹುಳಿಯನು ಕುಡಿಸಿದೆ
ಕೊಕ್ಕರೆಗೆ ಔತಣದ ಕೋರಿಕೆ ತಂದಿದೆ
ಕಪ್ಪೆಗಳ ಹಬ್ಬವ ಕಣ್ಣಾರೆ ಕಂಡು
ಆಮೆ ಮದುವೆಗೆ ತಲೆನೀರು ಸುರಿದಿದೆ IIಮಳೆ ಬಂತಮ್ಮಾ II

ಕರಿ ನೆಲದ ಬಿರುಕೆಲ್ಲ ಕೈಯ್ಯಾರೆ ಸವರಿ
ಎರೆಭೂಮಿ ನೆಲವನು ಗದ್ದೆಯ ಮಾಡಿದೆ
ಮಣ್ಣುಗಡ್ಡೆಯ ನಡುವೆ ಖವ್ವಾತು ಮಾಡಿ
ಸವಳು ಭೂಮಿಯ ತಾಕಿ ಓಟವ ಕಿತ್ತಿದೆ
ಉಕ್ಕುವ ಹೆಂಡದಿ ತಣ್ಣೀರು ಸುರಿದು
ಈಚಲುಗಿಡ ಗಡಿಗೆ ಮೂತಿಯ ತೊಳೆದಿದೆ IIಮಳೆ ಬಂತಮ್ಮಾ II

ತಾ ಬರುವ ಮುಂಚೇನೆ ತೂಮುಗಳ ಎಬ್ಬಿಸಿ
ತನ್ನ ಹಾಡಿಗೆ ತಾನೇ ತಾಳ ಹಾಕಿದೆ ನೋಡು
ಬಿಳಿ ಮಲ್ಲಿಗೆ ಬಣ್ಣ ಮತ್ತಷ್ಟು ಬಿಳುಪಾಗಿಸಿ
ಕೆಂಪು ಮಲ್ಲಿಗೆ ತೊಳೆದು ಕಂಪನು ಸೂಸಿದೆ
ತುಲಶಮ್ಮ ದೀಪದ ಚಿಪ್ಪುವಿನಲಿ ಸೇರಿ
ಹೂ ಬಿಸಿಲ ಹರಳಲ್ಲಿ ನಿಗ ನಿಗಾ ಎಂದಿದೆ IIಮಳೆ ಬಂತಮ್ಮಾ II

ವೆಮುಲಾಡ ರಾಜನ್ನ ಪ್ರಾರ್ಥನೆ ನೋಡಿ
ಪಕ್ಕದ ಮನೆಗಳ ಜಳ ಜಳ ತೊಳೆದಿದೆ
ಅರಳಿ ಎಲೆ ತೋಯಿಸಿ ಉರುಳಿ ಉರುಳಿ ಬಿದ್ದು
ಸಾಧುಗಳ ಸಮಾಧಿ ಸನ್ನಿಧಿಗೆ ಸೇರಿದೆ
ಸೂಫಿ ದರ್ಗಾ ಸುತ್ತಿ ಸಲಾಮು ಮಾಡಿದೆ
ನೆಗೆವ ನಂದಿಕೋಲಿಗೆ ಬೆಳ್ಳಿ ಮೆರುಗದ್ದಿದೆ IIಮಳೆ ಬಂತಮ್ಮಾ II

ಹರಿದಾಡಿ ಹರಿದಾಡಿ ಗೋದಾವರಿಯನು ಸೇರಿ
ಸೀತಮ್ಮ ಪಾದಗಳ ಶಿರಭಾಗಿ ತಾಕಿದೆ
ಅಂಕು ಡೊಂಕಾಗಿ ವನವೆಲ್ಲ ತಿರುಗಿ
ಕೃಷ್ಣಮ್ಮ ಒಡಲಲಿ ಇಷ್ಟಾದಿ ಉಡುಗಿದೆ
ದುಂದುಭಿ ತಲೆ ತಾಕಿ ದೂಳೆಲ್ಲ ತೊಳೆದು
ಅಂದಾದ ಉಸುಕನು ಕನ್ನಡಿಯ ಮಾಡಿದೆ
ಇಷ್ಟ ಇದೆಯೋ ಇಲ್ಲೋ ಪ್ಯಾಟೆಗೆ ಬಂದಿದೆ
ಮೂಗು ಮುಚ್ಚಿಕೊಂಡು ಮೂಸಿಯಲಿ ಮುಳುಗಿದೆ IIಮಳೆ ಬಂತಮ್ಮಾ II


_________________________________________________________________
ತೂಮು= ಮಳೆಹುಳ, ಮೂಸಿನದಿ= ಹೈದರಾಬಾದ್ ನಗರದಲ್ಲಿ ಹರಿಯುವ (ಈಗ ಚರಂಡಿಯಾಗಿ ಉಳಿದ) ನದಿ ಹೆಸರು. ವೆಮುಲಾಡ ರಾಜನ್ನ= ಕರೀಂ ನಗರ ಜಿಲ್ಲೆಯ ವೆಮುಲವಾಡದಲ್ಲಿರುವ ದೇವಸ್ಥಾನ ಮತ್ತು ಅಲ್ಲಿರುವ ರಾಜ ರಾಜೇಶ್ವರ ಸ್ವಾಮಿ.


ಕನ್ನಡಕ್ಕೆ : ರಮೇಶ ಅರೋಲಿ.