Monday, April 13, 2009

ಓರಿಸ್ಸಾ: ಇಲ್ಲಿ ಬದುಕು ಯಾರಿಗೂ ಮುಖ್ಯವಲ್ಲ!

ದೇಶಾದ್ಯಂತ ಮತ್ತೆ ಸರ್ಕಸ್ ಶುರುವಾಗಿದೆ. ಸೊ-ಕಾಲ್ಡ್ ಜನ ಪ್ರತಿನಿಧಿಗಳು ಕಣ್ತುಂಬ ನೀರು ತುಂಬಿಕೊಂಡು ಓಣಿ ವಠಾರ ಗಲ್ಲಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹಳ್ಳಿಗಾಡಿನ ಹೆಣ್ಣು ಮಕ್ಕಳ ಹೆರಿಗೆ, ರೋಗ ಉಲ್ಬಣ ಇಲ್ಲ ಹಸಿವಿನಿಂದ ಜನ ಸಾಯುತ್ತಿರುವಾಗ ಪೂರೈಸದ ವಾಹನ ಮತ್ತು ಭದ್ರತಾ ವ್ಯವಸ್ಥೆಯನ್ನು ಮತ ಚಲಾಯಿಸಲು ಮಾತ್ರ ತಪ್ಪದೇ ಒದಗಿಸುವುದಾಗಿ ಸಂಬಂದಪಟ್ಟ ಅಧಿಕಾರಿಗಳು ಹೇಳುತ್ತಿದ್ದಾರೆ. ಮತ್ತು ಜನ ಕೂಡ ಕಳೆದ ಅರವತ್ತು ವರ್ಷದಿಂದ ಇದನ್ನು ಕೇಳಿಸಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ ಯಾಕೋ ಸಲ ಕಳೆದ ವರ್ಷ ಕೋಮುವಾದಿಗಳಿಂದ ಹಲ್ಲೆಗೊಳಗಾದ ಒರಿಸ್ಸಾದ ಕೆಲ ಪ್ರದೇಶಗಳ `ಪ್ರಜಾಪ್ರಭುತ್ವ ದೇಶದ ಮತದಾರ ಮಹಾಶಯ' ಮಾತ್ರ ಸರ್ಕಾರಿ ಕ್ಯಾಂಪ್ ಬಿಟ್ಟು ಕದಲುವಂತೆ ಕಾಣುತ್ತಿಲ್ಲ. ಎರಡು ತಿಂಗಳಿಂದ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಕುಟುಂಬಗಳು ರಿಲೀಫ್ ಕ್ಯಾಂಪ್ ಗಳು ಮುಚ್ಚಿದ್ದರೂ ಹಳ್ಳಿಗೆ ಮರಳಲು ಭಯಗೊಂಡು ಪಟ್ಟಣದ ಬಯಲು ಪ್ರದೇಶಗಳಲ್ಲಿ ಬಿಡಾರ ಹೂಡಿವೆ. ಇದರಲ್ಲಿ ಹೆಚ್ಚಿನವರು ದಲಿತ-ಕ್ರಿಶ್ಚನ್ನರು ಮತ್ತು ಆದಿವಾಸಿಗಳಿದ್ದಾರೆ. ಸಾವಿನ ನೆರಳಡಿ ಕೂತವರ ಬಿಡಾರಗಳೆದುರು ನಿಂತು ಚುನಾವಣೆಯ ಭಾಷಣ ಬಿಗಿಯುತ್ತಿರುವ ಚಿತ್ರಣ ಮಾತ್ರ ಸ್ವತಂತ್ರ ಭಾರತದ ನಾಚಿಕೆಗೇಡುತನದ ಸ್ಥಿತಿಯಾಗಿದೆ.


ಒಂದು ಹಿನ್ನೋಟ :


ಭಾರತವು ೧೯೪೬ ವರೆಗೂ ಹೆಚ್ಚಾಗಿ ಜಾತಿಜಗಳಗಳ ಕಂಡಿದೆ. ಹಿಂದೂ-ಮುಸ್ಲಿಂ ಗಲಭೆ ಪ್ರಕರಣಗಳು ಹೊಡೆದಾಟದಲ್ಲಿ ಕೊನೆಗೊಳ್ಳುತ್ತಿದ್ದವು. ಆದರೆ ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಮಾತ್ರ ಧರ್ಮದ ಹೆಸರಿನಲ್ಲಿ ಮತಾಂಧರು ಮಾಡಿದ ಸಾಮಾನ್ಯರ ಕಗ್ಗೊಲೆಯೇ ಸರಿ. ಆಧುನಿಕ ಪರಿಕಲ್ಪನೆಯಾದ ಕೋಮುವಾದವನ್ನು ಪ್ರತಿಪಾದಿಸುವವರು ಮಧ್ಯ ಕಾಲಿನ ದಿನಗಳಲ್ಲಿ ನಡೆದ ಘಟನೆಗಳತ್ತ ಬೆರಳು ಮಾಡುತ್ತಾ ಆಗಿನ ಧಾರ್ಮಿಕ ಸಂಸ್ಥೆಗಳು ಅನುಸರಿಸುತ್ತಿದ್ದ ಆಚರಣೆಗಳನ್ನು ತಮ್ಮ ಧ್ಯೇಯಗಳನ್ನಾಗಿಸಿಕೊಂಡು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮತ್ತು ವಸಚಾಟು ಭಾರತದ ಒಂದು ಕೋಮಿನ ರಾಜಕಾರಣಿಗಳು ಇದನ್ನೊಂದು ರಾಜಕೀಯ ಸಿದ್ಧಾಂತವನ್ನಾಗಿ ಬಳಸಿಕೊಂಡದ್ದು ಈಗ ಇತಿಹಾಸ. ಅದಕ್ಕೆ ಕೋಮುವಾದ ಒಂದು ಸಾಮಾಜಿಕ ನೈಜ ಪರಿಕಲ್ಪನೆಯಲ್ಲದ್ದಿದ್ದರು ಅದನ್ನು 'ಪುನರುತ್ಥಾನ' ವೆಂಬ ಹೆಸರಿನಲ್ಲಿ false consciousness ಬಿತ್ತುತ್ತಿದ್ದಾರೆ ಎನ್ನುತ್ತಾರೆ ಇತಿಹಾಸಕಾರ ಬಿಪಿನ್ ಚಂದ್ರ ತಮ್ಮ Communalism in Modern India ಪುಸ್ತಕದಲ್ಲಿ.


ಪ್ರಾಂತೀಯ ಭಾರತ ಸಮಾಜದ ಯಾವ ನೂನ್ಯತೆಗಳನ್ನು ಗಮನಿಸಿ ಬ್ರಿಟಿಷರು ನಮ್ಮನ್ನು ಆಳಿದ್ದರೋ ಅವೇ ಅಂಶಗಳು ರಾಷ್ಟ್ರೀಯ ಚಳುವಳಿ ರೂಪುಗೊಳ್ಳಲು ಸಹಕರಿಸಿದವು. ಹೀಗಾಗಿ ಭಾರತಕ್ಕೆ ರಾಷ್ಟ್ರೀಯತೆ ಮತ್ತು ಕೋಮುವಾದದ ಪರಿಕಲ್ಪನೆಗಳು ಆಧುನಿಕವೆಂದೆ ಹೇಳಬೇಕು. ಹಾಗೆ ರಾಷ್ಟ್ರೀಯ (ರಾಜಿ?) ಚಳುವಳಿಗೆ ಜನರನ್ನು ಒಗ್ಗೂಡಿಸಲು ಕಾಂಗ್ರೆಸ್ ನಾಯಕರು ಬಳಸಿಕೊಂಡದ್ದು `ಸ್ವದೇಶಿ', `ರಾಷ್ಟ್ರೀಯತೆ' ಮತ್ತು `ಐಕ್ಯತೆ' ಪರಿಕಲ್ಪನೆಗಳನ್ನೆ. ಆದರೆ ಕರಮಚಂದ ಗಾಂಧೀ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಿಂದೂ ಧರ್ಮವನ್ನು (?) ಒಂದು ರಾಷ್ಟ್ರೀಯ ಅಸ್ಮಿತೆಯನ್ನಾಗಿ ಅರ್ಥೈಸಿ ಮೂಲಕ ಭಾರತದ ಎಲ್ಲ ದಲಿತ ಮತ್ತು ಆದಿವಾಸಿಗಳೆಲ್ಲ ಹಿಂದೂ ಧರ್ಮದ ಭಾಗವೇ ಎಂದು ಘೋಷಿಸಿದರು. ಗಣೇಶ ಚತುರ್ಥಿಯನ್ನು ಸಾರ್ವಜನಿಕ ಆಚರಣೆಯನ್ನಾಗಿ ಪರಿಗಣಿಸಬೇಕೆಂಬ ಬಾಲ ಗಂಗಾಧರ ತಿಲಕರ ಆಶಯ ಕೂಡ ರಾಷ್ಟ್ರೀಯತೆ ಬಿತ್ತುವಿದೆ ಇರಬೇಕು.


ಆದರೆ ರಾಷ್ಟ್ರೀಯತೆ ಜೊತೆ ಜೊತೆಗೆ ಕೊಮುವಾದವು ಬೆಳೆದ ರೀತಿಗೆ ಮೇಲಿನ ನಾಯಕರು ಪರಿಹಾರ ಹುಡುಕುವಲ್ಲಿ ವಿಫಲರಾದರೆಂದೆ ಹೇಳಬೇಕು. ಏಕೆಂದರೆ ಸ್ವಾತಂತ್ರೋತ್ತರ ಭಾರತದಲ್ಲಿ ಕೋಮುವಾದ ಇಷ್ಟು ತೀವ್ರ ಗತಿಯಲ್ಲಿ ಹರಡಲು ಮುಖ್ಯ ಕಾರಣ ಕನಿಷ್ಠ ಹೊಸ ರಾಷ್ಟ್ರೀಯತೆ ವರ್ಗ ತನ್ನ ಭಾಷಿಕ-ಸಾಂಸ್ಕೃತಿಕ ಪರಿಕಲ್ಪನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸದಿರುವಿಕೆ ಮತ್ತು ದಲಿತರೊಂದಿಗಿನ ಜಾತಿ ವ್ಯವಸ್ಥೆ ಬಗ್ಗೆ ಮೌನ ವಹಿಸಿದ್ದಾಗಿದೆ. ಇದನ್ನು ಸರಿಯಾಗಿ ಗುರುತಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರರನ್ನು ಯಾರು ಅರ್ಥ ಮಾಡಿಕೊಳ್ಳಲಿಲ್ಲ. ಅದು ಬೇರೆಯದೇ ಚರ್ಚೆ. ದೇಶ ಸ್ವತಂತ್ರಗೊಂಡು ಅಥವಾ ಬ್ರಿಟೀಷರಿಂದ ಅಧಿಕಾರ ಹಸ್ತಾಂತರಗೊಂಡಾಗ ಇನ್ನು ದೇಶದ ಸಾಮಾನ್ಯ ಜನ ದಲಿತ;ಆದಿವಾಸಿಗಳಿಗೆ ಮತ್ತು ಹಿಂದುಳಿದವರಿಗೆ ಭವಿಷ್ಯವಿರದು ಎಂದು ಅರಿತಿದ್ದ ಅಂಬೇಡ್ಕರ್ ಅದಕ್ಕಾಗಿ ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ ಅಳವಡಿಸಿದರು.


ಬ್ರಿಟೀಷರ ಆಳ್ವಿಕೆಯಲ್ಲಿ ರೂಪಿಸಲಾಗಿದ್ದ `ಕ್ರಿಮಿನಲ್ಸ್ ಟ್ರೈಬ್ ' ಕಾಯ್ದೆ ೧೮೭೧ ಪ್ರಕಾರ ಆದಿವಾಸಿ ಬುಡಕಟ್ಟು ಮತ್ತು ಅಲೆಮಾರಿ ಬೇಟೆಗಾರರನ್ನು `ಅಪರಾಧಿ ಬುಡಕಟ್ಟು' ಎಂದು ಗುರುತಿಸಲಾಗಿತ್ತು. ಆದರೆ ಭಾರತೀಯ ಸಂವಿಧಾನ ಜನರನ್ನು ೧೯೫೨ ರಲ್ಲಿ ಶೆಡ್ಯೂಲ್ಡ್ ಟ್ರೈಬ್ ಎಂದು ಕರೆಯಿತು. ಹೀಗೆ ಎಸ್ಟಿ ಗಳೆಂದು ಗುರುತಿಸಲ್ಪಡುವ ಆದಿವಾಸಿ ಬುಡುಕಟ್ಟು ಜನರು ನಿಜವಾಗಿಯೂ ಮೂಲ ನಿವಾಸಿಗಳಾಗಿದ್ದು `ಅನುಸೂಚಿತ ಬುಡಕಟ್ಟು' ಎಂಬ ಪದವು ಕೇವಲ ಆಡಳಿತ ದೃಷ್ಟಿಯಿಂದ ಮತ್ತು ನಿರ್ದಿಷ್ಟ ಸೌಲಭ್ಯ ; ರಕ್ಷಣೆ ಒದಗಿಸಲು ಮತ್ತು ಹಿಂದುಳಿದಿರುವಿಕೆಯನ್ನು ಗುರುತಿಸಲು ರೂಪಿಸಲಾದ ಮಾನದಂಡ ಮಾತ್ರ.


ದುರಂತವೆಂದರೆ ಸ್ವತಂತ್ರ ಭಾರತದ ಮೇಲ್ಜಾತಿಗಳು ಅಲೆಮಾರಿಗಳನ್ನು ಇನ್ನೂವರೆಗೂ ಅನಾಗರಿಕರು; ಕಳ್ಳತನದವರು ಎಂದೆ ನೋಡುತ್ತಿದೆ. ಹೀಗೆ ಕಾಡನ್ನೇ ನಂಬಿದ ಸಾವಿರಾರು ಆದಿವಾಸಿ ;ಬುಡಕಟ್ಟುಗಳು ಈಶಾನ್ಯ ರಾಜ್ಯಗಳು ಸೇರಿದಂತೆ ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ್, ಓರಿಸ್ಸಾ ಮತ್ತು ಕರ್ನಾಟಕ ಆಂಧ್ರ ಪ್ರದೇಶಗಳಲ್ಲಿ ವಾಸಿಸುತ್ತಿವೆ.


ಏನೀ ಕಂಧಮಾಲ್ ? ಯಾರೀ ಪಾನಾ ಕುಯಿ-ಕಂಧಗಳು?


ಓರಿಸ್ಸಾದ ಹಿಂದುಳಿಸಲ್ಪಟ್ಟ ಜಿಲ್ಲೆಗಳಲ್ಲಿ ಗಾಜಿಪಾಟಿ (ಗಂಜಂ) ಮತ್ತು ಕಂಧಮಾಲ್ ಕೂಡ ಎರಡು. ಇಲ್ಲಿಯ ಹೆಚ್ಚಿನ ಜನಸಂಖ್ಯೆ ಆದಿವಾಸಿಗಳಾದ ಕುಯಿ-ಕಂಧ ಮತ್ತು ದಲಿತರಾದ ಪಾನಗಳಿಂದ ಕೂಡಿದೆ. ದುರಂತವೆಂದರೆ ನೈಸರ್ಗಿಕವಾಗಿ ಸಂಪದ್ಭರಿತವಾದ ಕಂಧಮಾಲ್ ಹುಣಿಸೆ, ಅಲ್ಲ ಮತ್ತು ಅರಿಶಿನ ಬೆಳೆಗಳನ್ನು ವಿಫುಲವಾಗಿ ಬೆಳೆದರೂ ಇಲ್ಲಿಯ ಹೆಚ್ಚಿನ ದಲಿತರು ಮತ್ತು ಆದಿವಾಸಿಗಳು ಗ್ರಾಮೀಣ ಬಡ ರೈತರಾಗಿದ್ದು ಆದಾಯದ ಮೂಲವಾಗಿ ಕಾಡಿನ ಉತ್ಪನ್ನಗಳನ್ನೇ ಅವಲಂಬಿಸಿದ್ದಾರೆ. ಇಲ್ಲಿಯ ದೊಡ್ಡ ವ್ಯಾಪಾರಿಗಳೆಲ್ಲ ಪಕ್ಕದ ಗಾಜಿಪಾಟಿಯವರಾಗಿದ್ದು ಮೊದಲಿಂದಲೂ ಹಿಂದುತ್ವದ ಅಜೆಂಡಾವನ್ನು ಬೆಂಬಲಿಸುತ್ತಾ ಬಂದಿದ್ದಾರೆ.

ಇರುವುದರಲ್ಲಿಯೇ ದಲಿತ ಪಾನಗಳು ಸಣ್ಣ ವ್ಯಾಪರಸ್ತರಾಗಿದ್ದು ಅಲ್ಪ-ಸ್ವಲ್ಪ ಹಿಡುವಳಿ ಭೂಮಿ ಹೊಂದಿದ್ದಾರೆ. ಆದರೆ ಕ್ರೈಸ್ತ ಮಠಕ್ಕೆ ಮತಾಂತರಗೊಂಡ ಇವರು ಒಂದರ್ಥದಲ್ಲಿ ಜಾತಿ ಪದ್ದತಿಯಿಂದ ರೋಸಿ ಹಿಂದೂ ಆಚರಣೆಗಳನ್ನು ಧಿಕ್ಕರಿಸುತ್ತಾ ಬಂದಿದ್ದಾರೆ. ಹೀಗಾಗಿ ಹಿಂದುತ್ವದ ಬೆಂಬಲಿಗರಾದ ದೊಡ್ಡ ವ್ಯಾಪಾರಿಗಳು ಸದಾ ಇವರನ್ನು (ದಲಿತರನ್ನು) ದುರ್ಬಲಗೊಳಿಸಲು ಯತ್ನಿಸುತ್ತಾರೆ.


ಇತರೆ ಚುನಾಯಿತ ಸರ್ಕಾರಗಳು ಸೇರಿದಂತೆ ಕಳೆದ ಭಾಜಪ -ಬಿಜದ (ಬಿಜು ಜನತಾ ದಳ) ಸಂಯುಕ್ತ ಸರ್ಕಾರವು ಸದಾ ಅಧಿಕಾರಕ್ಕಾಗಿ ಸೆಣಸಾಡುತ್ತಾ ಇಲ್ಲಿಯ ಖನಿಜ ಸಂಪತ್ತನ್ನು ಲೂಟಿ ಮಾಡುವುದರಲ್ಲೇ ಮಗ್ನವಾಗಿದೆ. ಹೀಗಾಗಿ ಸಮುದಾಯದ ಅಭಿವೃದ್ಧಿಯ ನಿರ್ಲಕ್ಷ ಆದಿವಾಸಿ-ದಲಿತರನ್ನು ಶಿಕ್ಷಣ ;ಆರೋಗ್ಯ ಮತ್ತು ವಸತಿ ಗಾಗಿ ಸ್ವ-ಸಹಾಯ ಸಂಘ ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಅವಲಂಬಿಸುವಂತೆ ಮಾಡಿದೆ. ಅವಕಾಶವನ್ನು ಬಳಸಿಕೊಂಡ ಕ್ರೈಸ್ತ ಮಿಶನರಿಗಳು ನೆರವಿನ ಹಸ್ತ ಚಾಚುವ ಮೂಲಕ ತಮ್ಮೆಡೆಗೆ ಸೆಳೆದುಕೊಂಡಿವೆ. ಆದಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ಸಮುದಾಯಗಳನ್ನು ಧಾರ್ಮಿಕವಾಗಿ ಒಡೆಯಲು ಪ್ರವೇಶಿಸಿದ್ದು ಕೋಮುವಾದಿ ವಿಶ್ವ ಹಿಂದೂ ಪರಿಷತ್.


ಕ್ರಿಸ್ತೀಕರಣದ ಮೌನ ಪ್ರಾರ್ಥನೆ ;ಕೇಸರೀಕರಣದ ಹುಚ್ಚು ನರ್ತನೆ : ಅಮಾಯಕರ ಮೇಲೆ ಸತತ ದಾಳಿ


ಆಗ ೧೯೬೫ -೬೬ ದೇಶಾದ್ಯಂತ ಗೋರಕ್ಷಣ ಆಂದೋಲನ ಆರಂಭಿಸಿದ ಆರೆಸ್ಸೆಸ್ ಅದರ ಭಾಗವಾಗಿ ಓರಿಸ್ಸಾದಲ್ಲಿ ಹಿಂದುತ್ವದ ಖಾತೆ ಹೊಂದಲು ರಘುನಾಥ ಸೇಥಿ ಎಂಬ ದಲಿತನನ್ನು ವಿಶ್ವ ಹಿಂದೂ ಪರಿಷತ್ ಪ್ರಚಾರಕನನ್ನಾಗಿ ನೇಮಿಸಿತು. ಅಲ್ಲದೆ ತನ್ನ ವಿದ್ಯಾರ್ಥಿ ಶಾಖೆಯಾದ ಎಬಿವಿಪಿಯ ಅಕೌಂಟ್ ಕೂಡ ಓಪನ್ ಮಾಡಿತ್ತು.


೧೯೬೪ ರಲ್ಲಾಗಲೇ ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯ ಬಿಸಿ ಈಶಾನ್ಯ ರಾಜ್ಯಗಳು ಸೇರಿದಂತೆ ಕೋಲ್ಕತ್ತಾ , ಜೇಮಶೆಡ್ ಪುರ, ರಾಂಚಿ ಮತ್ತು ರೋರ್ ಕೆಲದವರೆಗೂ ಹಬ್ಬಿತ್ತು. ಓರಿಸ್ಸಾದ ರೋರ್ ಕೆಲಾ ಸ್ಟೀಲ್ ಟೌನ್ ಶಿಪ್ ನಲ್ಲಿ ಮುಸ್ಲಿಮರ ಮೇಲೆ ನಡೆದ ಹಲ್ಲೆ ಸ್ವಾತಂತ್ರೋತ್ತರ ಒರಿಸ್ಸಾದಲ್ಲಿ ನಡೆದ ಮೊದಲ ಕೋಮು ಹಿಂಸೆ ಎಂದು ಪರಿಗಣಿಸಲಾಗಿದೆ. ಹೀಗೆ ಭಾಜಪಾ ತನ್ನ ಹಿಂದೂ ಮತಾಂಧ ದಾಳಿ ಮುಂದುವರೆಸಲು ಮತ್ತು ತನ್ನ ಮತಗಳನ್ನು ಸ್ಥಿರಗೊಳಿಸಿಕೊಳ್ಳಲು ಅಂಗ ಸಂಘಿಗಳಾದ ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮತ್ತು ಸ್ಥಳೀಯ ಮಟ್ಟದಲ್ಲಿ ವನವಾಸಿ ಕಲ್ಯಾಣ ಆಶ್ರಮ ಮೂಲಕ ಚಟುವಟಿಕೆಯಲ್ಲಿ ತೊಡಗಿತು.


`ರಾಷ್ಟ್ರ ಕಾರ್ಯ'ಕ್ಕಾಗಿ ೧೯೭೦ ರಲ್ಲಿ ಕಂಧಮಾಲ್ ಜಿಲ್ಲೆಯ ಚಾಕಪಾಡ ಪ್ರದೇಶದಲ್ಲಿ ಇತ್ತೀಚಿಗೆ ನಕ್ಷಲರಿಂದ ಹತ್ಯೆಯಾದ ಲಕ್ಷ್ಮಣಾನಂದ ಸರಸ್ವತಿ ಒಂದು ಆಶ್ರಮ ತೆರೆದ. ಆದರೆ ಇದೇ ಪ್ರದೇಶದಲ್ಲಿ ಅದಾಗಲೇ ಕ್ರಿಶ್ಚನ್ ಮಿಶನರಿಗಳು ವಿವಿಧ ಸ್ವಯಂ-ಸೇವಾ ಸಂಸ್ಥೆಗಳ ಮೂಲಕ ಕೆಲಸ ಮಾಡುತ್ತಾ, ದಲಿತರಲ್ಲಿಯೇ ಪ್ರಮುಖ ಜಾತಿಯಾದ ಪಾನಾಗಳನ್ನು ಕ್ರೈಸ್ತ ಧರ್ಮಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಲಕ್ಷ್ಮಣಾನಂದ ಇಲ್ಲಿಯ ಪ್ರಮುಖ ಆದಿವಾಸಿ-ಬುಡಕಟ್ಟುಗಳಾದ ಕಂಧ ಕುಯಿಗಳಲ್ಲಿ ಹಿಂದುತ್ವದ 'False consciousness ' ಅನ್ನು ಬೋಧಿಸುವಲ್ಲಿ ಯಶಸ್ವಿಯಾದ. ಅವರ `ಭಾರತೀಯ ಕೇಸರಿ' ಸಂಸ್ಕೃತಿಯ ಅಜೆಂಡಾವನ್ನು Institutionalize ಗೊಳಿಸುವುದಕ್ಕೆ ಸ್ಥಾಪನೆಯಾದದ್ದೇ ಕುಯಿ ಸಮಾಜ ಸಮನ್ವಯ ಸಮಿತಿ.


ಆದರೆ ಮೊದಲೇ ಕ್ರೈಸ್ತ ಧರ್ಮದಲ್ಲಿದ್ದ ಆದಿವಾಸಿ ಕುಯಿ ಕಂಧರನ್ನು ನಿಜವಾದ ಆದಿವಾಸಿಗಳಲ್ಲ ಎಂದು ಸಮುದಾಯ ನಾಯಕರಿಂದ ಘೋಷಿಸಲ್ಪಟ್ಟಿತು. ಅಲ್ಲದೆ ಮತಾಂತರಗೊಂಡವರನ್ನು ಸಮಾಜದಿಂದ ಹೊರ ಹಾಕುವ ಬೆದರಿಕೆ ಮತ್ತು ಕಿರುಕುಳ ಕೊಡುವುದಕ್ಕೆ ಆರಂಭಿಸಿತು. ಇದರ ಭಾಗವಾಗಿ ೧೯೮೦ ರಲ್ಲಿ ಅದಾಗಲೇ ಕ್ರೈಸ್ತ ಮಠಕ್ಕೆ ಸೇರಿದ ಕೆಲ ದಲಿತ ಆದಿವಾಸಿಗಳನ್ನು ಮರು-ಮತಾಂತರ ಮಾಡುವ "ಘರ್ ವಾಪಾಸಿ" (ಮರಳಿ ಮನೆಗೆ) ಕಾರ್ಯಕ್ರಮದಡಿ ಮರಳಿ ಹಿಂದೂ ಧರ್ಮಕ್ಕೆ ತರಲಾಯಿತು. ಮತ್ತು ಧರ್ಮಯಾತ್ರೆ, ಯಜ್ಞೆಗಳನ್ನು ಏರ್ಪಡಿಸುವ ಮೂಲಕ ಆದಿವಾಸಿಗಳನ್ನು ವ್ಯವಸ್ಥಿತವಾಗಿ ಹಿಂದೂ ಆಚರಣೆಯ ಭಾಗವೆಂಬಂತೆ ಭ್ರಮಿಸಲಾಯಿತು.


೧೯೯೯ ರಲ್ಲಿ ಕುಯಿ ಭಾಷೆ ಮಾತನಾಡುವ ದಲಿತ-ಕ್ರೈಸ್ತರಾದ ಪಾನಾಗಳು ತಮಗೂ ಎಸ್.ಟಿ ಸ್ಥಾನ ಕೊಡಬೇಕೆಂದು ಒತ್ತಾಯಿಸಿದಾಗ ಅದಾಗಲೇ `ಕೇಸರಿ'ಗೊಂಡಿದ್ದ ಕುಯಿ -ಕಂಧಗಳು ಇದಕ್ಕೆ ವಿರೋಧ ವ್ಯಕ್ತಪಡಿಸುವಂತೆ ನೋಡಿಕೊಳ್ಳಲಾಯಿತು. ಎರಡು ಸಮುದಾಯಗಳ ತಿಕ್ಕಾಟ ಹೊಡೆದಾಟಕ್ಕೆ ತಿರುಗುವಂತೆ `ಬೆಂಬಲಿಸಿದ್ದು' ಇದೇ ಸ್ವರ್ಗವಾಸಿ (?) ಸರಸ್ವತಿ ಸ್ವಾಮಿ. ಅದೇ ವರ್ಷ ಬಜರಂಗಿಗಳಾದ ದಾರ ಸಿಂಗ್ ಮತ್ತವನ ಸಹಚರರು ಆಷ್ಟ್ರೇಲಿಯಾ ಮೂಲದ ಗ್ರಹಾಮ್ ಸ್ಟೇನ್ಸ್ ಮತ್ತು ಆತನ ಇಬ್ಬರು ಮಕ್ಕಳನ್ನು ಮತಾಂತರ ನೆಪವೊಡ್ಡಿ ವಾಹನ ಸಮೇತ ಸಜೀವವಾಗಿ ಸುತ್ತು ಹಾಕಿದರು. ಅಲ್ಲದೆ ಮಯೂರ ಭಾಂಜ್ ಜಿಲ್ಲೆಯಲ್ಲಿ ಜಕ್ವೆಲಿನ್ ಮೇರಿ ಎಂಬ ಕ್ಯಾಥೊಲಿಕ್ ಪಂಥಕ್ಕೆ ಸೇರಿದ ಸೇವಕಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಯಿತು.


ಅಲ್ಲದೆ ಭಾಜಪಾ-ಬಿಜೆಡಿ (ಬಿಜು ಜನತಾ ದಳ) ದೋಸ್ತಿ ಸರ್ಕಾರದ ಬೆಂಬಲವಿದ್ದ ಆರೆಸ್ಸೆಸ್, ವಿಹೆಚ್ ಪಿ ಮತ್ತು ಬಜರಂಗಿಗಳು ೧೯೯೯ ಚಂಡ ಮಾರುತ ಸಂದರ್ಭದಲ್ಲಿ `ಸ್ವಯಂ ಸೇವೆಗೆ' ಬಂದವರು ಮರಳಿ ಹೋಗುವುದನ್ನೇ ಮರೆತರು. ಇವರ ದಾಳಿಗಳನ್ನು ವಿರೋಧಿಸಿ ವಿವಿಧ ಪ್ರಗತಿಪರ ದಲಿತ ಸಂಘಟನೆಗಳು ಪ್ರತಿಭಟನೆಗಿಳಿದರೆ ಚಡ್ಡಿ-ದೋಸ್ತ್ ಸರ್ಕಾರವು 'ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಇಂಥ ಮೆರವಣಿಗೆಗಳಿಗೆ ಅವಕಾಶ ನೀಡೆವು' ಎಂದು ಪೋಲಿಸ್ ಫೈರಿಂಗ್ ಗೆ ಆದೇಶ ನೀಡಿದ್ದವು. ಘಟನೆಯಲ್ಲಿ ಕಾಶಿಪುರದಲ್ಲಿ ಮೂರು ಜನ ಆದಿವಾಸಿಗಳು ಸಾವನ್ನಪ್ಪಿದ್ದರು. ೨೦೦೪ ಆಗಷ್ಟ ತಿಂಗಳಲ್ಲಿ ಪೂಲ್ ಬನಿ ಜಿಲ್ಲೆಯ ಚರ್ಚ್ ವೊಂದರ ಮೇಲೆ ದಾಳಿ ಮಾಡಿದ್ದಲ್ಲದೆ , ಜಗತ್ ಸಿಂಗ್ ಪೂರ್ ಜಿಲ್ಲೆಯ ಏಳು ಜನ ಕ್ರೈಸ್ತ ಮಹಿಳೆಯರು ಸೇರಿದಂತೆ ಒಬ್ಬ ಪಾದ್ರಿಯನ್ನು ಬಲವಂತವಾಗಿ ಹಿಡಿದು ತಲೆ ಬೋಳಿಸಿ ಗ್ರಾಮದಿಂದ ಬಹಿಷ್ಕರಿಸಲಾಗಿತ್ತು.


ಆದರೆ ಮುಖ್ಯವಾಗಿ ಸಮಸ್ಯೆ ಗಂಬೀರ ಸ್ವರೂಪ ತಾಳಿದ್ದು ೨೦೦೬ರ ಡಿಸೆಂಬರ್ ನಲ್ಲಿ ಡಿ-ಲಿಮಿಟೇಶನ್ ಕಮಿಷನ್ ಪ್ರಕಾರ ಕಂಧಮಾಲ್ ಜಿಲ್ಲೆ ಸದೀಯ ಮತ್ತು ಮೂರು ವಿಧಾನ ಸಭಾ ಕ್ಷೇತ್ರಗಳು ಎಸ್ ಟಿ ಮೀಸಲು ಕ್ಷೇತ್ರವಾಗಿ ಘೋಷಿಸಲ್ಪಟ್ಟು ದಲಿತ ಪಾನಾಗಳಲ್ಲಿ ಅತೃಪ್ತಿ ಮೂಡಿದಾಗ. ಆದರೆ ಆದಿವಾಸಿಗಳಿಗೆ ಹೋಲಿಸಿದರೆ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಜೀವನ ಮಟ್ಟದಲ್ಲಿ ದಲಿತರ ಸ್ಥಿತಿ ಸ್ವಲ್ಪ ಸುಧಾರಿಸಿದ್ದು ಸುಳ್ಳಲ್ಲ. ಧಾರ್ಮಿಕವಾಗಿ ಎರಡು ಸಮುದಾಯಗಳು ಒಂದು ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಿದ್ದ ಸಂದರ್ಭವನ್ನೇ ವೈಷಮ್ಯಕ್ಕೆ ತಿರುಗಿಸಲಾಗಿತ್ತು. ಹೀಗೆ ಒಂದೆಡೆ ಕ್ರೈಸ್ತ ಮಿಶನರಿಗಳು ದಲಿತ-ಪಾನಾಗಳನ್ನು ಮತ್ತು ಹಿಂದೂ ಸಂಘಟನೆಗಳು ಆದಿವಾಸಿ ಕಂಧರನ್ನು ಪರಸ್ಪರ ಎತ್ತಿಕಟ್ಟುವ ಕೆಲಸ ನಡದೇ ಇತ್ತು. ಹೊಡೆದಾಡಲು ಸಿಕ್ಕ ನೆಪವೆಂದರೆ ಲಕ್ಷ್ಮಣಾ ನಂದ ಸರಸ್ವತಿಯ ಸಾವು.


ಯಾರಿಗೂ ಕೇಳಿಸದ ದಲಿತ ಸಂಘಟನೆಗಳ ಕೂಗು.


ಸ್ವತಃ ಹತ್ಯೆಗೈದ ಮಾವೋಯಿಸ್ಟರು ಅದರ ಹೊಣೆ ಹೊತಾಗ ಕ್ರೈಸ್ತ ದಲಿತ ಪಾನಾಗಳನ್ನು ಸಂಶಯಿಸಿದ ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರ ಅನಾಮತ್ತಾಗಿ ಕ್ರೈಸ್ತ ಚರ್ಚ್ ಗಳ ಮೇಲೆ ದಾಳಿ ಮಾಡಿ ಅಮಾಯಕರನ್ನು ಕೊಲೆ ಮಾಡಿದರು. Asian centre for Human Rights (ACHR) ಪ್ರಕಾರ ಕನಿಷ್ಠ ಐವತ್ತು ಜನರನ್ನು ಸ್ಥಳದಲ್ಲಿಯೇ ಸಾಯಿಸಲಾಗಿದೆ. ಅಲ್ಲದೆ ಸಾವಿರಾರು ಕ್ರೈಸ್ತ ಪಾದ್ರಿಗಳು ಜೀವ ರಕ್ಷಣೆಗಾಗಿ ಸರ್ಕಾರ ಕ್ಯಾಂಪ್ ಮತ್ತು ಕಾಡು ಸೇರಿದರು.


ಆದರೆ ಎಲ್ಲ ಘರ್ಷಣೆಗೆ ಭೂ-ಒಡೆತನ ಆರ್ಥಿಕ ಕಾರಣ ಮತ್ತು ಕಾಡಿನ ಉತ್ಪನ್ನಗಳ ಮೇಲಿನ ಹಕ್ಕು ಸ್ಥಾಪನೆ ಕಾರಣ ಕೊಡುತ್ತಿರುವ ಸ್ಥಳೀಯ ಕಮ್ಯುನಿಸ್ಟ್ ಪಕ್ಷಗಲಾಗಲಿ ಅಥವಾ ಇದೊಂದು 'ಹಿಂದೂ ಮತ್ತು ಕ್ರೈಸ್ತ ಧರ್ಮದ ನಡುವಿನ ಹೋರಾಟ' ಎಂದು ಹೇಳುತ್ತಿರುವ ಮಿಷನರಿ, ಹಿಂದೂಸಂಘಟನೆಗಳಿಗಾಗಲಿ ನಿಜವಾಗಿಯೂ ದಲಿತಪರ ಕಾಳಜಿಯಿಲ್ಲ. ಏಕೆಂದರೆ ಹಿಂದೂ ಸಂಘಟನೆಗಳು ಹೇಳುವ ಹಾಗೆ ಆದಿವಾಸಿಗಳ ದಲಿತರ ಬದುಕಿನ ಸುಧಾರಣೆಯ ಯಾವ ಗುರಿಯೂ ಇವರ ಸಂಘಟನೆಗಿಲ್ಲ. ಮತ್ತು ಸಂಘಟನೆಗಳ ಗುರಿಯೂ ಇದಲ್ಲ. ಸ್ವಲ್ಪ ಮೃದು ದೋರಣೆ ಹೊಂದಿರುವ ಕ್ರೈಸ್ತರಿಗೆ ಮತಾಂತರವೇ ಅಂತಿಮ ಗುರಿ. ಮಧ್ಯೆ ಮಾವೋಯಿಸ್ಟರು ದಲಿತರನ್ನು 'ದಾರಿ ತಪ್ಪಿಸುತ್ತಿದ್ದಾರೆ' ಎಂಬ ಆರೋಪ ಹೊತ್ತಿದ್ದಾರೆ. ಇನ್ನು ಕಮ್ಯುನಿಷ್ಟ ರಂತು ಕೇವಲ 'ವರ್ಗ ಸಂಘರ್ಷ' ವೆಂದು ಆಕಳಿಸುತ್ತಿದ್ದಾರೆ.


ಆದರೆ ಒಬ್ಬ ಮನುಷ್ಯನ ಬದುಕು ಅವನು ಹಿಂದೂ, ಕ್ರೈಸ್ತ, ಮುಸ್ಲಿಂ ಅಥವಾ ಬಡವ , ಶ್ರೀಮಂತ ಮತ್ತು ಅಕ್ಷರಸ್ಥ -ಅನಕ್ಷರಸ್ಥ ಎಂಬ ಕಾರಣಕ್ಕಾಗಿ ಶ್ರೇಷ್ಠವಾಗುವುದಿಲ್ಲ. ಏಕೆಂದರೆ ಬದುಕು ಯಾವತ್ತಿಗೂ Unconditional worth. ಇಂತಹ ಕರಾರು-ರಹಿತ ಮೌಲ್ಯ ಬದುಕಿಗಾಗಿ ಹೋರಾಡುತ್ತಿರುವ ಕಂಧಮಾಲ್ ಸ್ಥಳೀಯ ದಲಿತ ಸಂಘಟನೆಗಳ ಕೂಗು ಮಾತ್ರ ಕೇಳಿಸಿಕೊಳ್ಳುವ ಕಿವಿಗಳಿಲ್ಲದಂತಾಗಿದೆ.


_______________________

ಮಾಹಿತಿ ಕೃಪೆ:


* A Tragedy foretold by Bibuthi Bhushan Nandi – The Statesman, Sep 8 2008.

* Communalism in Modern India by Bipan Chandra.
* In a crucified State by Biswamoy Pati –Hindustan Times Sep 2, 2008.
* PUCL Bulletin, Feb 2003.