Monday, April 6, 2009

ಕಾದು ಕುಂತೀವಿ ನಾವು ಹೆಳವಯ್ಯ ಬಾರೋ..!



ಹೆಳವ ಹೆಳವನ ತಂದೆ ಮತ್ತೇನು ತಂದೆ
ಭೂತಗನ್ನಡಿ ಒಗಟು ಬಲ್ಲೋನು ಎಂದೆ !

ಹಂಗಿದ್ದೆ ಹಿಂಗಿದ್ದೆ ಸರದಾರನಂಗಿದ್ದೆ
ಅಮವಾಸೆ ಕತ್ತಲಿಗೆ ಬೆಂಕಿ ಕಲ್ಲುಜ್ಜಿದ್ದೆನೆಂದಿ
ಊರಗೌಡನ ಉಪ್ಪರಿಗೆಗೆ ಸುಣ್ಣವಾಗಿದ್ದೆನೆಂದಿ
ಕೇರಿ ಕರಿಯವ್ವನ ಹುಟ್ಟು ತಿಳಿದೆದ್ದೆನೆಂದಿ
ಉಂಡುಗಿದ ಬೀಡಕ್ಕೆ ರಂಗೇರಿದ್ದೆನೆಂದಿ
ಹೆಳವ ಹೆಳವನ ತಂದೆ ಮತ್ತೇನು ತಂದೆ
ಭೂತಗನ್ನಡಿ ಒಗಟು ಬಲ್ಲೋನು ಎಂದೆ !

ಕಲ್ಲು ಕಲ್ಲಿನ ಮನೆಯ ಕಣಿ ಹೇಳಿದ್ದೆನೆಂದಿ
ಮಂಚ ಮಂಚದ ಮಾತಿಗೆ ಕಿವಿಯಾಗಿದ್ದೆನೆಂದಿ
ವಂಶ ಬೀಜದ ಮೂಲ ನೋಡಿದ್ದೆನೆಂದಿ
ಚುಕ್ಕಿ ಚಂದ್ರರ ಗಂಟು ಬಿಚ್ಚಿದ್ದೆನೆಂದಿ
ಭೂಮಿ ಬಾನಿಗೆ ನೀನೆ ಕತೆ ಹೇಳಿದ್ದೆನೆಂದಿ
ಹೆಳವ ಹೆಳವನ ತಂದೆ ಮತ್ತೇನು ತಂದೆ
ಭೂತಗನ್ನಡಿ ಒಗಟು ಬಲ್ಲೋನು ಎಂದೆ !

ಕಟ್ಟಕಡೆ ಗುಡಿಸಲಿಗೆ ಬರ್ತೀನಿ
ಪಾಪ-ಪುಣ್ಯದ ಗುಟ್ಟು ಹೇಳ್ತೀನಿ ಎಂದಿ
ಬಾಬಾರೋ ಹೆಳವಯ್ಯ ಮರ್ತೀವಿ ಎಂದಿ
ಕಾದು ಕುಂತೀವಿ ನಾವು ಪಂಚಮರ ಮಂದಿ
ದಿಟ ನುಡಿವೆ ಮಣ್ಣ ಕಳೆಗಿನ್ನು ಕೊನೆಗಾಲ ಎಂದಿ
ಹೆಳವ ಹೆಳವನ ತಂದೆ ಮತ್ತೇನು ತಂದೆ
ಭೂತಗನ್ನಡಿ ಒಗಟು ಬಲ್ಲೋನು ಎಂದೆ!

ಹೋಗಿ ಬನ್ನಿ ಕನಸುಗಳಾದರು ದಕ್ಕಲಿ ನಿಮಗೆ!



ಕನಸು ಟಪಾಲಿನಲ್ಲಿ ಸಾವು ಮಲಗಿದಂತೆ
ಮಲಗೇ ಇದ್ದಳು ಮುದುಕಿ
ಗುಳೇ ಹೋದ ಮೊಮ್ಮಗಳ
ಹಾಲುಗಲ್ಲದ ಮೇಲೆ
ಯಾರೋ ನೆತ್ತರಿನ ಮುತ್ತಿಟ್ಟಂತೆ
ಮಗ್ಗಲು ಬದಲಿಸುತ್ತಾ
ಇಲ್ಲ ಇದು ಕನಸಿರಬೇಕೆಂದು !

ಕಳೆದ ಎಳ್ಳಮವಾಸ್ಯೆಯಲಷ್ಟೆ
ಚಿಗರೆ ಕಾಲಿನ ಪುಟ್ಟ ಪಾದಕ್ಕೆ
ಮುತ್ತಿಟ್ಟು ತಾನೆ ಕಟ್ಟಿದ ಗೆಜ್ಜೆ ಮೂರ್ಛೆಬಿದ್ದಂತೆ
ಸತ್ತ ಎಳೆಗರುವಿನ ಸುತ್ತ
ಗಿಡುಗ ; ನಾಯಿ ಮತ್ತು ಬರಗಾಲದ ಸಮಿತಿ
ಮುಚ್ಚಿಟ್ಟ ಸ್ಮಶಾನ ಪುಸ್ತಕದ ಹಾಳೆ ತೆಗೆದು
ಹಸಿವಿನ ಆಳ ಅಗಲಕ್ಕೆ ಇಂಚು ಪಟ್ಟಿಯ ಹಿಡಿದು
ನೀವು ಬಡತನ ರೇಖೆಗಿಂತ ಕೆಳಗಿನವರೆ ? ಎಂದಂತೆ
ಇಲ್ಲಿಲ್ಲ ಕಂಡಿತಾ ಇದು ಕನಸಿರಬೇಕೆಂದು
ಮತ್ತೆ ಮಗ್ಗಲು ಬದಲಿಸುತ್ತಾಳೆ ಮುದುಕಿ!

ಈ ಸಲ ಬೆಂಡೋಲೆ ಅಜ್ಜಿಗೆ
ಎಂದ ಮೊಮ್ಮಗನ ಭಾಷೆಗೆ
ನಿನ್ನ ಕನಸುಗಳಾದರು ನಿನಗೆ ದಕ್ಕಲಿ ಮಗನೆ
ಎಂದು ಹೋದ ಗಾಡಿಯತ್ತ ಕೈ ಮಾಡಿದ್ದಳು
ಖಾಲಿ ಅಂಗಳದ ಕಪಾಳಕ್ಕೆ
ಜಾರಿದ ಕಣ್ಣಹನಿ ಗುಟ್ಟು
ಸೆರಗಿಗಷ್ಟೆ ಹೇಳಿದ್ದಳು !

ಸಂಜೆ ಬರುವ ದಾರಿಯ ತಿಳಿಯಬೇಕೆನಿಸಿ
ಅಗಸೆಕಟ್ಟೆಗೆ ಅಡ್ಡ ನಿಲ್ಲಲು ಬೆಕ್ಕು
ಹಾದ ಅಮಾಯಕ ಅಂಚೆಯವನು
ತಂದ ಮೃತ್ಯುಪತ್ರದ ಮೇಲೆ
ತನ್ನದೇ ವಿಳಾಸ ಕಂಡು ನರಳುತ್ತಲೇ ಸತ್ತಂತೆ
ಬೇಸರಿಸಿಕೊಂಡ ಕಾಗೆ ಹಳ್ಳಿ ಬಿಡುವಾಗ
ಯಾಕೋ ಈಗ ಮತ್ತೊಂದು
ಸಾವಿನ ಸುದ್ದಿಯನೆ ತಂದಂತಿದೆ
ಪಕ್ಕದ ಮನೆ ಮೊಬೈಲು ಎನ್ನಲು
ತಟ್ಟನೆ ಕಣ್ಬಿಟ್ಟ ಮುದುಕಿ
ಶಿವನೆ ಇನ್ನು ಸುಳ್ಳಾಗಲಿ ಕನಸುಗಳೆಲ್ಲ ಎಂದಿತು!

Friday, April 3, 2009

ಓಡಿ ಹೋದವಳಲೊಂದು ವಿನಂತಿ..!



ಒಂದು ಶರದೃತುವಿನ
ಬೆಳ್ಳಂ ಬೆಳದಿಂಗಳ ರಾತ್ರಿ
ಗೋದಾವರಿ ತೀರದಿ ಮರುಳ ರಾಶಿಯ ಮೇಲೆ
ಪಿಸುಗುಟ್ಟಿದ ಮಾತಿನ ಮೇಲಾಣೆ
ಅಡುಗೆಗಾಗಿ;ಅರ್ಧ ರಾತ್ರಿಯ ನಿಮಿಷೆಗಳಿಗಾಗಿ
ಗಂಡನೊಂದಿಗೆ ಉಳಿದಾಕೆ
ಅಂದು ಮದ್ಯಾನದ ಸೋಮಾರಿ ಗಾಳಿ
ಆಕೆಯ ಎದೆ ತಾಕಿದಾಗಲೇ
ಯಾರೋ ಗಾಢ ನೋಟದಿ ಬೆನ್ನು ಸವರಿದಂತೆನಿಸಿ
ನದಿ ನೀರಿನಲಿ ನಕ್ಷತ್ರ ಹೂಗಳು
ಸ್ವರ್ಗದ ಶವ ಯಾತ್ರೆಗೆ ಹೊರಡುವ ಹೊತ್ತು
ಬಿಕಾರಿ ಸುಂದರ ತುರುಕನೊಂದಿಗೆ
ಆಕೆಯ ಹೆಜ್ಜೆ ಸಾಗಿದಂತಿತ್ತು!

ಓಡಿ ಹೋದವಳಿಗೆ
ಕಡಿಮೆಯಾದದ್ದಾದರು ಏನು?
ಪಾಪ ಮೆಲುಕು ಹಾಕಿದರು ಮರ್ಯಾದಸ್ತರು
ರಾತ್ರಿ ಊಟದ ನಂತರ!


ಅಮೀರ್ `ಅಂದು ರಾತ್ರಿ
ನನ್ನನು ಅವರು ಹಡಗಿನ ಹಾಗೆ ದೂಡಿದರು
ಅವನ ಕೋಣೆಗೆ ' ಎಂದಳಾಕೆ
`ಆ ಮುತ್ತೈದೆ ಮುಂಡೆಯರೇ ಅಷ್ಟು
ಪುರಾಣ ಸ್ತ್ರೀಯರ ಹಾಗೆ ಗರತಿಗಿರಿಗಾಗಿ
ಪುಣ್ಯ ದಕ್ಕಿಸಿಕೊಳ್ಳುವ ನೆನಪದಿ
ಗಂಡಂದಿರುಂಡ ಎಂಜಲು ಕೂಡ
ಪವಿತ್ರ ಎನ್ನುವರು' ಎಂದನಾತ


ಇರಲಿ,
ಅವರು ನಡೆವ ದಾರಿಗುಂಟ
ಒಂದಷ್ಟು ಅರವಟ್ಟಿಗೆ ಹಾಗೆ; ಆ ಇಬ್ಬರ ಮದ್ಯೆ
ಅಂತರ ಮರೆಸಲೊಂದು ಗೊರವಂಕ ನಿನ್ನದೇ ಹಾಡು
ಮತ್ತೆ ಮರೆಯದೆ ಆಕೆಗೆ ನೆನಪಿಸು
ಅಂಗಳಕೆ ಹಸಿರುಡಿಸಿ ; ಹುಣಿಸೆಗೆ ಹೂ-ಮುಡಿಸಿ
ಪುಟ್ಟ ಗುಡಿಸಲಿಗೆ ಒರಗಿ ಕಾದಿರುವನು ಮೀರ
ದೀದಿಯ ಬರುವಿಗಾಗಿ ಇಡೀ ಮೈದಾನವನೆ ತೆರೆದಿಟ್ಟು
ಒಮ್ಮೆ ಬಂದು ಹೋಗಲು ಹೇಳು ದಯವಿಟ್ಟು!


(ಸ್ಪೂರ್ತಿ : ಚಲಂ'ರ ಮೈದಾನಂ ಕಾದಂಬರಿ)

Sunday, February 8, 2009

ಬೆರಳ ತೋರಿಸಿ ಹೊರಟುಬಿಡು ಸಖಿ!


ಶವದ ಮೇಲೆ ಸುರಿಯದಿದ್ದರೇನು ಸುಗಂಧಗಳನು ಸ್ಪರ್ಶಿಸಿ ಹೊರಟುಬಿಡು ಸಖಿ
ಕಣ್ಣ ಹೂ-ಗಳು ಬಿಡುವ ಅತ್ತರಿನ ಹನಿ ಕೊಳುವವರಿರಲು ಮನ್ನಿಸಿ ಹೊರಟುಬಿಡು ಸಖಿ !

ಬದುಕುವಾಸೆಯನು ಬಸೆದುಕೊಟ್ಟೆ ಅದೊಳಿತು ಋಣಿ ನಿನಗೆ ಸ್ಮರಿಸಿ ಹೊರಟುಬಿಡು ಸಖಿ
ಸಾವ ಶಬ್ದಕೋಶಕ್ಕೆ ಈಸೊಂದು ಅರ್ಥಕೊಟ್ಟವರು ಇನ್ನಿಲ್ಲದಿರಲು ನೆನಸಿ ಹೊರಟುಬಿಡು ಸಖಿ !

ಲೋಬಾನದ ಸಂಜೆಗಳ ಕೀಮತ್ ತಿಳಿದು ಹಠಬೇಡ ಕ್ಷಮಿಸಿ ಹೊರಟುಬಿಡು ಸಖಿ
ಬಿಕ್ಕಳಿಸುವ ಚಂದ್ರ ಬೀದಿಗಿಳಿಯಲು ದೀಪಗಳ ಜರೂರೆನು ಆರಿಸಿ ಹೊರಟುಬಿಡು ಸಖಿ !

ನಾಳೆಯ ದೇವರು ನಡುರಸ್ತೆಗಿಳಿದು ಸ್ಮಶಾನದ ದಾರಿ ಕೇಳಲು ಬೆರಳ ತೋರಿಸಿ ಹೊರಟುಬಿಡು ಸಖಿ
ಜಾವದ ಇಬ್ಬನಿ ಯಾರ ಹಣೆ ಮೇಲೆ ನೀರಾಗುವುದೋ ಊಹಿಸಿ ಹೊರಟುಬಿಡು ಸಖಿ !

ಈಗಾಗಲೇ ಮತ್ತೇರಿರಬಹುದಾದ ಸುಲ್ತಾನ-ಸುಖ್ಬೀರರಿಗೆ 'ಅರೋಲಿ'ಯ ಬರುವಿನ್ನು
ಕೇವಲ ಮತ್ತೊಂದು ಬಟ್ಟಲಿಗೆ ನೆಪವೆಂದು ಒಮ್ಮೆ ತಿಳಿಸಿ ಹೊರಟುಬಿಡು ಸಖಿ!

Wednesday, January 7, 2009

ಆಕಾಶವಿಲ್ಲದ ಊರಿಗೆ ನಕ್ಷತ್ರ ಕಳುಹಿಸಿ!



ಇಲ್ಲ ಚಂದ್ರನಿಲ್ಲ
ಸೂರ್ಯನೂ ಇಲ್ಲ
ಒಟ್ಟಾರೆ ಆಕಾಶವೇ ಇಲ್ಲದ
ಈ ಊರಿಗೆ ನಕ್ಷತ್ರ ಕಳುಹಿಸಿ
ಬೆಳದಿಂಗಳು ಬೇಡಿದ್ದು
ಯಾವ ದೇಶದ ನ್ಯಾಯ?

ಇಲ್ಲ ಹಾಡು ಹೋಗಿಲ್ಲ
ಯಾವ ಗೆರೆಯೂ ಇಲ್ಲಿ
ಹಸ್ತವೆ ಇಲ್ಲದ ಕೈಯ
ಗಿಳಿಯ ಮುಂದಿಟ್ಟು
ಭೂ-ಮಧ್ಯೆ ರೇಖೆ ಬೇಡಿದ್ದು
ಯಾವ ದೇಶದ ನ್ಯಾಯ?

ಇಲ್ಲ ಕೆರೆಯಿಲ್ಲ
ತೊರೆಯೂ ಇಲ್ಲ
ಪಸೆಯೇ ಇಲ್ಲದ ಈ ನೆಲಕೆ
ಬಿಸಿಲುಗುದುರೆಯ ಬಿಟ್ಟು
ನೀರು ಬೇಡಿದ್ದು
ಯಾವ ದೇಶದ ನ್ಯಾಯ?

ಇಲ್ಲ ಮುಖವಿಲ್ಲ
ಆಕಾರವು ಇಲ್ಲ
ಅಸಲು ಉಸಿರಾಡದ
ಈ ಹೃದಯಗಳಲಿ
ಒಲವ ಬಚ್ಚಿಟ್ಟು
ಸುಮ್ಮನಿರಿ ಎಂದದ್ದು
ಯಾವ ದೇಶದ ನ್ಯಾಯ?

Tuesday, January 6, 2009

ಸ್ಮಶಾನಗಳು ಮುಚ್ಚಲಿವೆ ಮನುಷ್ಯರಿದ್ದರೆ ಕಳುಹಿಸಿ!



ದೀಪಗಳು ಮಲಗುವ ಹೊತ್ತು
ಬಹಳ ಹಿಂದಿನ ಮಾತೇನಲ್ಲ
ಕೋಟೆ ಗೋಡೆಯ ಕೆಳಗೆ
ಅವಿತ ಕತ್ತಲಿನಲ್ಲಿ
ಹುಟ್ಟು ಹಬ್ಬಕೆ ಹುಣ್ಣಿಮೆ ನೋಡೆಂದವರು
ಸಂಜೆಯೊಂದಿಗೆ ಸಂಚು
ಹೂಡಿದ್ದು ತಿಳಿಯದೆ ಅಲ್ಲಿ
ಅಮಾಯಕ ಗಾರೆ ಕೆಲಸದ ಹುಡುಗರು
ಸುರಿದ ನಲ್ಲೆಯರ ನೆನಪಿನಾ ಮಳೆಗೆ
ನಕ್ಷತ್ರ ಹೂತಿಟ್ಟು ಆಲಿಕಲ್ಲು ಆಯುತಿದ್ದರು!


ಬಿರಿದ ಎದೆಗಳ ಮೇಲಾಣೆ
ನೀವು ರಾಮಕೋಟಿಯ ಬರೆವಾಗ
'ರಾತ್ರಿಗಳು ಇಷ್ಟು ಸುದೀರ್ಘ ಏಕೆಂದು
ಇಲ್ಲಿ ದೈವಪಟದೆದುರು
ಧರಣಿ ಹೂಡಿದ್ದರು ಮುಡಿ ಸೂಳೆಯರು !
ಪಾಪ ಭಾಷಣದ ಚಪ್ಪಾಳೆಗೆ
ಕೇಳಿಸಿರಲಿಕ್ಕಿಲ್ಲ ಹೆಣಬಿದ್ದ ಸದ್ದು ಮತ್ತು;
ಹಾದ ಬುಲೆಟ್ಟಿನ ವೇಗ ಪೇದೆ ಎದೆಗೆ
ಮತ್ತೊಂದು ನಕ್ಷತ್ರ ತಂದದ್ದು!


ದೇವರ ಮೇಲಾಣೆ ಆತನಿಗೂ
ನೆಮ್ಮದಿ ಇಲ್ಲ ಈಗ!
ಹಲ್ಲಿ ಆಕಳಿಸುವ ಗಳಿಗೆ
ಬೆಟ್ಟ ಕೆಳಗಿಟ್ಟ ಹನುಮನಿಗೆ ಗುಮಾನಿ,
ಹೆಬ್ಬೆರಳ ಬೇಡಿದ್ದು ಅನುಮಾನಿಸುವ
ಬೇಡರ ಹುಡುಗ ಕಟ-ಕಟೆ ಹತ್ತಿದ್ದಾನೆ!
ಕಾಲು ಸೋತ ಶಿಲಾಬಾಲಕೆ
ಜಾಹಿರಾತು ನೋಡುತ್ತಿದ್ದಾಳೆ ಕೂತು
'ಶ್ರಮಿಸುವ ಪಾದಗಳಿಗೆ ಸವೆದ ಚಪ್ಪಲಿ!


ಇನ್ನು ತೋಪಿನಲ್ಲಿ
ತೂರಿಬಿಟ್ಟ ಮುತ್ತು ತನಗೆ ತಲುಪಿಲ್ಲ
ಎನ್ನುವ ಆಕೆಯ ದೂರನು ಆತ
ಸಂದೇಹ ಪಡುತ್ತಾನೆ!


ಸಂಜೆ ಸಮಾಧಿಯ ಮೇಲೆ
ಸೌಗಂಧಿಯ ಹೆರಿಗೆ
ಸಹಿಸಲಾಗುತ್ತಿಲ್ಲ ಪಾಪ ಮೊದಲ ನೋವು
ಅಮಾಯಕ ಹಕ್ಕಿ ಮರಿಗೆ!
ಅಗೋ ಸ್ಮಶಾನಗಳು ಮುಚ್ಚಲಿವೆ
ದಯವಿಟ್ಟು ಮನುಷ್ಯರಿದ್ದಾರೆ ಕಳುಹಿಸಿ!

Thursday, January 1, 2009

ನಿಮ್ಮ ಮನೆಯೆದುರಿನ

ಮಲ್ಲಿಗೆ ಬಳ್ಳಿ

ಇಂದು ಎಂದಿಗಿಂತ

ಹೆಚ್ಚು ಹೂ ಬಿಡಲಿ;

ಒಳ್ಳೊಳ್ಳೆ ಗೆಳೆಯರಿಗೆ

ಸಿಹಿ ಕನಸು ಬಿದ್ದಂತೆ!