Monday, April 6, 2009

ಹೋಗಿ ಬನ್ನಿ ಕನಸುಗಳಾದರು ದಕ್ಕಲಿ ನಿಮಗೆ!



ಕನಸು ಟಪಾಲಿನಲ್ಲಿ ಸಾವು ಮಲಗಿದಂತೆ
ಮಲಗೇ ಇದ್ದಳು ಮುದುಕಿ
ಗುಳೇ ಹೋದ ಮೊಮ್ಮಗಳ
ಹಾಲುಗಲ್ಲದ ಮೇಲೆ
ಯಾರೋ ನೆತ್ತರಿನ ಮುತ್ತಿಟ್ಟಂತೆ
ಮಗ್ಗಲು ಬದಲಿಸುತ್ತಾ
ಇಲ್ಲ ಇದು ಕನಸಿರಬೇಕೆಂದು !

ಕಳೆದ ಎಳ್ಳಮವಾಸ್ಯೆಯಲಷ್ಟೆ
ಚಿಗರೆ ಕಾಲಿನ ಪುಟ್ಟ ಪಾದಕ್ಕೆ
ಮುತ್ತಿಟ್ಟು ತಾನೆ ಕಟ್ಟಿದ ಗೆಜ್ಜೆ ಮೂರ್ಛೆಬಿದ್ದಂತೆ
ಸತ್ತ ಎಳೆಗರುವಿನ ಸುತ್ತ
ಗಿಡುಗ ; ನಾಯಿ ಮತ್ತು ಬರಗಾಲದ ಸಮಿತಿ
ಮುಚ್ಚಿಟ್ಟ ಸ್ಮಶಾನ ಪುಸ್ತಕದ ಹಾಳೆ ತೆಗೆದು
ಹಸಿವಿನ ಆಳ ಅಗಲಕ್ಕೆ ಇಂಚು ಪಟ್ಟಿಯ ಹಿಡಿದು
ನೀವು ಬಡತನ ರೇಖೆಗಿಂತ ಕೆಳಗಿನವರೆ ? ಎಂದಂತೆ
ಇಲ್ಲಿಲ್ಲ ಕಂಡಿತಾ ಇದು ಕನಸಿರಬೇಕೆಂದು
ಮತ್ತೆ ಮಗ್ಗಲು ಬದಲಿಸುತ್ತಾಳೆ ಮುದುಕಿ!

ಈ ಸಲ ಬೆಂಡೋಲೆ ಅಜ್ಜಿಗೆ
ಎಂದ ಮೊಮ್ಮಗನ ಭಾಷೆಗೆ
ನಿನ್ನ ಕನಸುಗಳಾದರು ನಿನಗೆ ದಕ್ಕಲಿ ಮಗನೆ
ಎಂದು ಹೋದ ಗಾಡಿಯತ್ತ ಕೈ ಮಾಡಿದ್ದಳು
ಖಾಲಿ ಅಂಗಳದ ಕಪಾಳಕ್ಕೆ
ಜಾರಿದ ಕಣ್ಣಹನಿ ಗುಟ್ಟು
ಸೆರಗಿಗಷ್ಟೆ ಹೇಳಿದ್ದಳು !

ಸಂಜೆ ಬರುವ ದಾರಿಯ ತಿಳಿಯಬೇಕೆನಿಸಿ
ಅಗಸೆಕಟ್ಟೆಗೆ ಅಡ್ಡ ನಿಲ್ಲಲು ಬೆಕ್ಕು
ಹಾದ ಅಮಾಯಕ ಅಂಚೆಯವನು
ತಂದ ಮೃತ್ಯುಪತ್ರದ ಮೇಲೆ
ತನ್ನದೇ ವಿಳಾಸ ಕಂಡು ನರಳುತ್ತಲೇ ಸತ್ತಂತೆ
ಬೇಸರಿಸಿಕೊಂಡ ಕಾಗೆ ಹಳ್ಳಿ ಬಿಡುವಾಗ
ಯಾಕೋ ಈಗ ಮತ್ತೊಂದು
ಸಾವಿನ ಸುದ್ದಿಯನೆ ತಂದಂತಿದೆ
ಪಕ್ಕದ ಮನೆ ಮೊಬೈಲು ಎನ್ನಲು
ತಟ್ಟನೆ ಕಣ್ಬಿಟ್ಟ ಮುದುಕಿ
ಶಿವನೆ ಇನ್ನು ಸುಳ್ಳಾಗಲಿ ಕನಸುಗಳೆಲ್ಲ ಎಂದಿತು!

No comments: