Tuesday, January 6, 2009

ಸ್ಮಶಾನಗಳು ಮುಚ್ಚಲಿವೆ ಮನುಷ್ಯರಿದ್ದರೆ ಕಳುಹಿಸಿ!



ದೀಪಗಳು ಮಲಗುವ ಹೊತ್ತು
ಬಹಳ ಹಿಂದಿನ ಮಾತೇನಲ್ಲ
ಕೋಟೆ ಗೋಡೆಯ ಕೆಳಗೆ
ಅವಿತ ಕತ್ತಲಿನಲ್ಲಿ
ಹುಟ್ಟು ಹಬ್ಬಕೆ ಹುಣ್ಣಿಮೆ ನೋಡೆಂದವರು
ಸಂಜೆಯೊಂದಿಗೆ ಸಂಚು
ಹೂಡಿದ್ದು ತಿಳಿಯದೆ ಅಲ್ಲಿ
ಅಮಾಯಕ ಗಾರೆ ಕೆಲಸದ ಹುಡುಗರು
ಸುರಿದ ನಲ್ಲೆಯರ ನೆನಪಿನಾ ಮಳೆಗೆ
ನಕ್ಷತ್ರ ಹೂತಿಟ್ಟು ಆಲಿಕಲ್ಲು ಆಯುತಿದ್ದರು!


ಬಿರಿದ ಎದೆಗಳ ಮೇಲಾಣೆ
ನೀವು ರಾಮಕೋಟಿಯ ಬರೆವಾಗ
'ರಾತ್ರಿಗಳು ಇಷ್ಟು ಸುದೀರ್ಘ ಏಕೆಂದು
ಇಲ್ಲಿ ದೈವಪಟದೆದುರು
ಧರಣಿ ಹೂಡಿದ್ದರು ಮುಡಿ ಸೂಳೆಯರು !
ಪಾಪ ಭಾಷಣದ ಚಪ್ಪಾಳೆಗೆ
ಕೇಳಿಸಿರಲಿಕ್ಕಿಲ್ಲ ಹೆಣಬಿದ್ದ ಸದ್ದು ಮತ್ತು;
ಹಾದ ಬುಲೆಟ್ಟಿನ ವೇಗ ಪೇದೆ ಎದೆಗೆ
ಮತ್ತೊಂದು ನಕ್ಷತ್ರ ತಂದದ್ದು!


ದೇವರ ಮೇಲಾಣೆ ಆತನಿಗೂ
ನೆಮ್ಮದಿ ಇಲ್ಲ ಈಗ!
ಹಲ್ಲಿ ಆಕಳಿಸುವ ಗಳಿಗೆ
ಬೆಟ್ಟ ಕೆಳಗಿಟ್ಟ ಹನುಮನಿಗೆ ಗುಮಾನಿ,
ಹೆಬ್ಬೆರಳ ಬೇಡಿದ್ದು ಅನುಮಾನಿಸುವ
ಬೇಡರ ಹುಡುಗ ಕಟ-ಕಟೆ ಹತ್ತಿದ್ದಾನೆ!
ಕಾಲು ಸೋತ ಶಿಲಾಬಾಲಕೆ
ಜಾಹಿರಾತು ನೋಡುತ್ತಿದ್ದಾಳೆ ಕೂತು
'ಶ್ರಮಿಸುವ ಪಾದಗಳಿಗೆ ಸವೆದ ಚಪ್ಪಲಿ!


ಇನ್ನು ತೋಪಿನಲ್ಲಿ
ತೂರಿಬಿಟ್ಟ ಮುತ್ತು ತನಗೆ ತಲುಪಿಲ್ಲ
ಎನ್ನುವ ಆಕೆಯ ದೂರನು ಆತ
ಸಂದೇಹ ಪಡುತ್ತಾನೆ!


ಸಂಜೆ ಸಮಾಧಿಯ ಮೇಲೆ
ಸೌಗಂಧಿಯ ಹೆರಿಗೆ
ಸಹಿಸಲಾಗುತ್ತಿಲ್ಲ ಪಾಪ ಮೊದಲ ನೋವು
ಅಮಾಯಕ ಹಕ್ಕಿ ಮರಿಗೆ!
ಅಗೋ ಸ್ಮಶಾನಗಳು ಮುಚ್ಚಲಿವೆ
ದಯವಿಟ್ಟು ಮನುಷ್ಯರಿದ್ದಾರೆ ಕಳುಹಿಸಿ!

Thursday, January 1, 2009

ನಿಮ್ಮ ಮನೆಯೆದುರಿನ

ಮಲ್ಲಿಗೆ ಬಳ್ಳಿ

ಇಂದು ಎಂದಿಗಿಂತ

ಹೆಚ್ಚು ಹೂ ಬಿಡಲಿ;

ಒಳ್ಳೊಳ್ಳೆ ಗೆಳೆಯರಿಗೆ

ಸಿಹಿ ಕನಸು ಬಿದ್ದಂತೆ!

Wednesday, November 26, 2008

ಎಳೆಯ ಪಾಪದ ಹೆಸರು ನಿಮ್ಮಿಚ್ಚೆಯಂತೆ ಇಟ್ಟುಕೊಳ್ಳಿ !

ಬಂದೇನು ಬರುವೇನು

ಭವದ ಭಾರವ ಜಗುಲಿಯಲಿ ತಗುಲಿಸಿ

ಕುದಿವ ನೆತ್ತರ ಸಾರಿಗೆ ಉಪ್ಪು ಹುಡಿಕಿ

ಉತ್ತವರ ಬೆವರು ಇಂಗಿ ಬಿಟ್ಟೀತೆ ಮಣ್ಣು

ಮರೆತು ಬಿಟ್ಟಂತೆ ಬೀಜ ನುಂಗಿದ ಭೂಮಿ

ಚಿಗುರುವ ; ಕಾಯುವ ಕಾಯಕವ ಇನ್ನು!

ತಂದೇನು ತರುವೇನು

ನಿಮ್ಮ ಪಾದುಕೆಗೆ ಜಾಜಿಮಲ್ಲಿಗೆ ಹೂವಾ!

ಅಳುವ ಬಸುರಿಯ ಎಳೆದು ಹಸೆಮಣೆಗೆ ತಂದಂತೆ

ಪಾಪವಾವುದು ಒಡೆಯ ಒಡಲು ತುಂಬಿದ್ದೆ ?

ಅಥವಾ ಹಗಲಿಗೆ ಹಂದರನೆಟ್ಟು ; ಬಾಸಿಂಗ ಕಟ್ಟಿದ್ದೆ!

ತಿಳಿಯದು ತಿಳಿ-ತಿಳಿಯ ಕೊಳದಿ ಮೀನು ಉಂಡಂತೆ !

ಕಂಡೇನು ಕಾಣೇನು

ಬಿಲ್ವ ಪತ್ರದ ತುಂಬ ನಿಮ್ಮ ಚಿತ್ತದ ಬಿಂಬ!

ಹೊರಟು ಹೋದವರು ಹೋಗಲಿಲ್ಲ ಬರಿಗೈಲಿ

ನುಡಿದು ಬಿಟ್ಟಿರಿ ' ಶುಭವಾಗತೈತೆ ! ಶುಭವಾಗತೈತೆ!

ಹಿಡಿ ಹಿಡಿದು ಎಡೆ ತೆಗೆದು ಕಾದಿಟ್ಟೆ ಜಂಗಮನಿಗೆ

ಯಾವ ಕಾಗೆಯೂ ಹಾಯಲಿಲ್ಲ ಇನ್ನಿತ್ತ ಒಂದು ಗಳಿಗೆ !

ಬಿಟ್ಟೇನು ಬಿಡುವೇನು

ಮುತ್ತ್ಯಗಳ ಮುತ್ತ್ಯ ಜೀವ ಎಂದಿಗೂ ಸ್ತುತ್ಯ !

ಹೇಳಿ 'ಮರುಳ'ದ ಮಾತು ವಚನವಾದಿತು ಹೇಗೆ ?

ತಿಪ್ಪೆಯಲಿ ಚಿಗುರಿದ ಹುಣಿಸೆ ಪುಕ್ಕ ತಾ-

ಕಾಯದು ಯಾರ ಬರುವಿನ ದಾರಿಗೆ

ಅರಳಿ ಹೋಳಾಯಿತು ಜೀವ ಪಾರಿಜಾತ!

ಕನ್ನಿದ್ದರೆ ಕಂಡು; ಎದೆ ಗವಚಿಕೊಳ್ಳಿ

ಎಳೆಯ ಪಾಪದ ಹೆಸರು ನಿಮ್ಮಿಚ್ಚೆಯಂತೆ ಇಟ್ಟುಕೊಳ್ಳಿ!

Wednesday, November 5, 2008

ಎದೆ ಭಾರ ಸುರಿದವಳು ಅರ್ಥ ಪಿಸುಗುಡುವೆಯಲ್ಲ!

ನಿನ್ನ ನೆಪವಿಲ್ಲದೆ ಹೊಟ್ಟೆತುಂಬ ನಗಬಹುದು ಬಲ್ಲೆಯಾ ಪಾರು
ಹೇಳಿಕೊಡು ಹೇಗೆ ದು:ಖ್ಖಿಸುವುದು ನಿನ್ನ ನೆಪವಿಲ್ಲದೆ ಪಾರು!


ಹಲ್ಲು ಕಿರಿಯಲು ಜಗದಿ ಏಸೊಂದು ಮುಖಗಳಿವೆ ಬಲ್ಲೆಯಾ ಪಾರು
ಒತ್ತರಿಸುವ ಅಳುವಿಗೆ ಕಣ್ಣಾಲಿ ನೀನು ಎಷ್ಟೊಂದು ಜರೂರಲ್ಲವೇ ಪಾರು!


ಸುಮ್ಮನಿರಲು ಯಾರ ಪ್ರಸ್ತುತಿಯು ಅಪ್ರಸ್ತುತ ಬಲ್ಲೆಯಾ ಪಾರು
ಜಗಳವಾಡಲು ಕಡೆಗೆ 'ಜೀವ' ಮುನಿದಿರಬೇಕಲ್ಲವೇ ಪಾರು!


ಅಂದಗತ್ತಿಯರ ಸಾವು ಸಾಕಿನ್ನು ತಾರೆಗಳು ಜಾರದಂತೆ ಹೇಳಬಲ್ಲೆಯಾ ಪಾರು
ಸಂಜೆ ಹಿತ್ತಲಿಗೆ ಬರುವೆ ಕಡುಗಪ್ಪು ಮುಖಮಾಡಿ ಸುರಿದು ಉತ್ತರಿಸುವಿಯಲ್ಲವೇ ಪಾರು!


ಹನಿ ಆವಿಯಾಗಳು ಯಾರ ಶಿಫಾರಸ್ಸು ಬೇಕು ಬಲ್ಲೆಯಾ ಪಾರು
ಹೊತ್ತ ಎದೆಭಾರ ಸುರಿದವಳು ನೀನು ಹಗುರದರ್ಥ ಪಿಸುಗುಡುವಿಯಲ್ಲವೇ ಪಾರು!


ಕನಸು ಹಾಯದ ರಾತ್ರಿ 'ಅರೋಲಿಗೆ' ಬೇಡವಾಗಿದೆ ಬಲ್ಲೆಯಾ ಪಾರು
ನಿನ್ನ ಅನುಪಸ್ಥಿತಿಯಲೂ ನಗು;ಹಸಿವುಗಳು ನೆನಪಾಗದಂತೆ ಮರೆಸಬೇಕಲ್ಲವೇ ಪಾರು!

ಆರು ಹಾಯ್ಕು


ಆಕಾಶ ಕಡಲಲಿ
ಲಂಗರುಯಿಲ್ಲದೆ ಅಲೆದವು
ಮೋಡದ ಹಡಗು!


ಹುಲ್ಲು ಕತ್ತಿಯ
ಇರಿದು ಕೊಂಡಿವೆ
ಇಬ್ಬನಿಯ ಶವ!


ಕಣ್ಣಿರು ಒರೆಸಲು
ರೆಪ್ಪೆ ಹೊಲೆದರೆ
ಆಕಾಶದಗಲ ರಕ್ತಪಾತ!


ಕಣ್ಣ ಹನಿಗಳ
ಕೊಳ್ಳುವವರಿದ್ದಿದ್ದರೆ
ಹೆಣ್ಣುಮಕ್ಕಳೇ ಶ್ರೀಮಂತರು!


ಮೀನು ಈಜು ಕಲಿಯವು
ಏಕೆಂದರೆ ಅವಕ್ಕೆ
ತರಬೇತುದಾರರೆ ಅಲಭ್ಯ!


ಕಣ್ಣಿರು
ಕುಡಿಯುವಂತಿದ್ದರೆ
ಸಮುದ್ರಗಳೇ ಖಾಲಿ!

***

Thursday, October 30, 2008

ಇತಿಹಾಸ ನೆಪವಾಗುತ್ತದೆ ಮನೆಯೆದುರಿನವನಿಗೆ!

ಪ್ರತಿ ಸೈನಿಕನು ಸಾಯುತ್ತಾನೆ
ವೀರಗಲ್ಲು ಆಗಬೇಕೆಂದಲ್ಲ
ಅಂತ:ಪುರದಿ ಹಾಸಿಗೆ
ಹಂಚಿಕೊಂಡ ದಾಸಿಯರು
ಸಿಂಹಾಸನದ ದಿನ ಹೂ ಸುರಿದಷ್ಟೇ ಸರಳ !

ಸತ್ತ ಉತ್ತರಕುಮಾರನ
ಸಮಾಧಿಯ ಮೇಲೆ ತಲವಾರು
ನೆಡುತ್ತಾರೆ ; ತರುವಾಯ
'ವೀರ ಸ್ವರ್ಗವಾಸಿ ಪ್ರಚಂಡ ದಿಗ್ವಿಜಯಿ'
ಎಂದು ಬರೆದವನ ಬೆನ್ನಿಗೆ
ಚೂರಿ ಇಡುತ್ತಾರೆ!

ನಗಾರಿ ಸದ್ದಿಗೆ ಹೆಜ್ಜೆ ಹಾಕಿದವರೇ
ಊರು ತೊರೆದರು
ಅವರವರ ಆಯುಷ್ಯದ ಬಿಂದಿಗೆ ಹೊತ್ತು!

ಕೋಟೆಯ ತುಂಬ ಈಟಿ
ಕಂಡವರ ಹೃದಯದಲಿ ಲೋಹ
ಹರಿಯುತ್ತಿರಬೇಕು!

ಎದುರಾಳಿಯ ಮಾಹಿತಿಯಿಲ್ಲದವರು
ವಿಳಾಸ ಹುಡಿಕಿ ಹೊರಟಿದ್ದಾರೆ
ಒಂದುವೇಳೆ ಅಂದುಕೊಂಡಂತೆ
ಅವರ ಮುಖದ ಮೇಲೆ ಗಡ್ಡ, ಬಿಳಿ ಟೊಪ್ಪಿಗೆ
ಅಥವಾ ಕೊರಳಲ್ಲಿ ಕ್ರಾಸಿನ ಚಿನ್ಹೆಗಳಿದ್ದರೆ
ದಾಳಿ ನಿಶ್ಚಿತವೆಂದು ಸಾರಲು!

ಹಾಗೆ ಮೈದಾನದಲಿ ಮೈಮರೆತ
ಅವರ ಮಕ್ಕಳು ಕುಡುಕ; ತಲೆಹಿಡುಕ
ಮತ್ತೆ ಕೊಲೆಗಡುಕರಾಗುತ್ತಾರೆ , ಇಲ್ಲ
ಅವರೂ ವಿಳಾಸ ಹುಡುಕಿ ಹೊರಡುತ್ತಾರೆ
ಹೀಗೆ ಇತಿಹಾಸ ನೆಪವಾಗುತ್ತದೆ
ಮನೆಯೆದುರು ಬದುಕುವವನಿಗೆ!

-ಅರೋಲಿ ರಮೇಶ್.

Saturday, August 30, 2008

ಇನ್ನು ಬರಹೇಳೆವೆಂದು ಮಾತುಕೊಡಿ !


ಎಲೆ ಅಸಹಾಯಕ ಕೊಠಡಿಗಳೇ
ದಯಮಾಡಿ ಒಮ್ಮೆ ಕಿವಿಗೊಡಿ
ಈಗ ಮತ್ತಷ್ಟು ಕತ್ತಲಾವರಿಸಲಿದೆ
ನೀರವ ಗ್ರಂಥಾಲಯದ
ಮಹಾನ್ ಚರಿತ್ರೆ ಪುಟಗಳೆದುರು ಕೂತವನಿಗೆ
ಸಮಾಧಿಯಲಿ ಹೂತವನ ಭೀತಿ!
ಬೆರಳುಗಳು ರಕ್ತ ತಾಕುವ ಮೊದಲು
ನನಗೊಂದು ಮಾತುಕೊಡಿ!

ಬೆಳಗಾಗುವುದರೊಳಗೆ
ಓಡಿ ಹೋಗಬೇಕೆಂದುಕೊಂಡವನ
ಕಾಲು ಬಿಗಿದ ಸರಪಳಿಯ ಸದ್ದು
ಆ ಅಮಾನುಷರಿಗೆ ಮುಟ್ಟಿಸಲಾರೆವೆಂದು !

ಮತ್ತು; ನನ್ನ ಸಂತೈಸಲು
ಕೈ ಚಾಚುವ ಸೂಲಗಿತ್ತಿ ಚಾಳಿಯ
ಕಾವ್ಯ ಪುಸ್ತಕಗಳನ್ನು
ಕಪಾಟಿನಾಚೆಯ ಕಿಟಕಿಯಿಂದ
ಹೊರಬಿಡೆವೆಂದು ಮಾತುಕೊಡಿ!
ಜೊಲ್ಲು ಸುರಿಯಿಸುವುದಷ್ಟೇ ಗೊತ್ತವಕ್ಕೆ
ಒಣ ವರ್ಣನೆ ಕಲ್ಲಿಗೆರಿದ ನೈವೇದ್ಯ
ಉಜ್ಜಿಕೊಂಡವನಿಗವು ಅನಗತ್ಯ ಶಬ್ದ !

ಹಾಗೆ ಈ ರಾತ್ರಿ ಹೊರಡುವ ಸುದ್ದಿ
ಆ ಮುದಿ ಮ್ಯಾಕ್ ಬೆತ್ತಲಿಗೆ ತಿಳಿಯುವುದು ಬೇಡ
ಮೊಂಬತ್ತಿ ಹಿಡಿದು ಕತ್ತಲೆ ಹುಡುಕುವ
ಅವಳದೊಂದು ವಿಚಿತ್ರ ಜಡ್ಡು!

ಅಗೋ ಅವಳು ಈ ಕಡೆಗೆ ಬರುತ್ತಿದ್ದಾಳೆ
ನಾನಿನ್ನು ಹೊರಟೆ...
ನಾಳೆ ಆ ಕಡೆಯ ಕಪಾಟಿನಲ್ಲಿ
"ಆತ್ಮ ಹತ್ಯೆಗೆ ಹೆದರಿದವನ ವೀರ ಚರಿತೆ"ಗೆ
ತಲೆಬರಹವಾಗುವ ಮುನ್ನ
ಮತ್ತೆಂದೂ ಬರಹೇಳೆವೆಂದು ಮಾತುಕೊಡಿ!