Tuesday, February 22, 2011

ಕ್ಷಮೆ ಕೋರಿ




ಕಿಕ್ಕಿರಿದ ರಸ್ತೆಗೆ
ಆಕಾಶ ಹಾಸಿ
ತುಕ್ಕು ತೇರಿಗೆ ಚುಕ್ಕಿಗಳಂಟಿಸಿ
ಬೇವಿನ ಮರಕ್ಕೆ ಮಾವಿನ ಎಲೆ ಕಟ್ಟಿ
ಸಂಜೆ ದೇವರ ದರುಶನಕೆ
ಕರೆಯೋಲೆ ಕೊಟ್ಟು
ಬಂದ ಬರಿಗಾಲ ಬಸಯ್ಯರಿಗೆ
ರಥಬೀದಿ ನಿಷೇಧಯೆಂದವರ
ಓ ಆಕಾಶವೇ ಕ್ಷಮಿಸು

ನೀನು ಮಾತು ಕೊಟ್ಟಂತೆ ಸುರಿದ
ಎಲ್ಲ ಹನಿಗಳ ಮುತ್ತಾಗಿಸದೆ ಹೋದೆ
ಸೂಳೆ ಮಕ್ಕಳು ಕೂಡ
ಸುತ್ತ ಎದೆಗಾಯದ ಗಾದೆಗಳೆಂದು
ಕಪ್ಪೆಚಿಪ್ಪುವಿನಲಿ ಮೊಟ್ಟೆಗಳಾಗಿಟ್ಟುಕೊಂಡಿದ್ದೆ
ಪಾಪ ಅಮಾಯಕ ಬಾಲ ಏಸುಗಳು
ಸಮುದ್ರದ ಕಡೆಗಾಲ ಕುಡುಗೋಲಿನೇಟಿಗೆನಲು
ಕಾವು ಕೂಡ ತಗುಲದಂತೆ ಬಚ್ಚಿಟ್ಟುಕೊಂಡಿದ್ದೆ
ಓ ಕಡಲೆ ಕ್ಷಮಿಸು

ನಿನ್ನ ಮುನಿಸಿಗೆ ಸಾವುಗಳಿಲ್ಲಿ
ಸುಗ್ಗಿಯ ನಾಯಿಕೊಡೆ ಕರುಣೆಗೆ
ಅಲೆಯ ತುಟಿಯಾಗಿ ಪಾದಮುತ್ತಿಕ್ಕುವೆ
ನೆಲದ ದಿಮ್ಮನಿಸಿಯ ಮಾತು
ನಿನಗೂ ತಲುಪಲಿ

ಈಗ ಸ್ವಲ್ಪ ಮಳೆಯಾಗಲಿ
ನನಗೆ ಬಾಯಾರಿಕೆ.

No comments: