Thursday, June 4, 2009

ಗತವೆಲ್ಲ ಶವದ ಮಲ್ಲಿಗೆಯಂತಿದ್ದರೆ



ಯಾವ ಉರಿಯ ದೀಪದ ಬೆಳಗು
ಎಂಥ ಎದೆಗಳ ಸುದುವುದೋ ತಿಳಿಯದೆ
ನೀನು ಮಾತ್ರ ನೋಡಬಲ್ಲ
ಸ್ಥಿತಿಯಲ್ಲಿದ್ದ ನನ್ನನ್ನು
ಯಾರೋ ತಾಕಿದಂತೆನಿಸಿ
ನೆಲವಪ್ಪಿಕೊಂಡ ಮೊಂಬತ್ತಿ ಹೊತ್ತಿಸಿದೆ
ನಡುಗುವ ಜಾವದ ಚಳಿಗೆ
ನಗರದ ಕಾರ್ಖಾನೆ ಚಿಮಣಿ
ನಿನ್ನ ನೆನಪ ಹೋಗೆ ಹೊರಚೆಲ್ಲಿದಂತೆ
ಬಿದ್ದ ಶಾಪದ ಮಳೆ ಎದುರು
ದು:ಖದ ಬಿಕಾರಿಯಾದೆ
ಚಾಚಿದ ಬೊಗಸೆ ಬಟ್ಟಲು ತುಂಬ
ಅಂದುಕೊಂಡಂತೆ ನೀನು
ಬರಿ ಆಲಿಕಲ್ಲನೆ ಸುರಿದೆ ; ಆದರೆ
ನಾನಿಲ್ಲಿ ಮೌನದ ಅಬ್ಬರವನ್ನು
ಅನುಮಾನಿಸುತ್ತಲೇ ಬಾಡಿಗೆ ಮನೆ ಹಿಡಿದೆ !

ಹೀಗೆ ನನ್ನ ಸ್ಮೃತಿಪಟಲದಲ್ಲಿ
ನಿನ್ನ ಕಣ್ಣಿನ ಚಿತ್ರ ಉಳಿದುಬಿಟ್ಟಿದ್ದೆ ಬೇರೆ
ಜಗದ ನೂರು ಕಣ್ಣಿನ ಅಲ್ಬಂ ಅದನು
ಬರೆದುಕೊಂಡಿದ್ದೆ ಬೇರೆ !

ಯಾವುದು ಏನಾದರು
ಗಾಯವನ್ನು ಮತ್ತಷ್ಟು ಹಸಿಯಾಗಿಸುವಂತಿದ್ದರೆ
ನನಗೆ ಅಂಥ ನೆನಪುಗಳೇ ಬೇಡ
ಗತವೆಲ್ಲ ಗೋರಿಯೊಳಗಿನ
ಶವದ ಮಲ್ಲಿಗೆಯಂತಿದ್ದರೆ
ನನಗೆ ಅಂಥ ಸುವಾಸನೆಯೇ ಬೇಡ!

No comments: