Thursday, June 4, 2009

ಅ-ಕಾಲ ಮೊರೆ



ಕಾಲ ಜ್ಞಾಪಕಕ್ಕೆ
ನಕ್ಷತ್ರ ಜಾರಿದಂತೆ
ಎಲ್ಲಾ ವಸಂತಗಳು
ಮಣ್ಣು ಪಾಲಾದವು
ಎಂದು ಕೊಂಡವನು
ಭೂಮಿ ತುಟಿ ಸೀಳಿ
ಹೊರಬಂದ ಚಿಗುರು
ಆಕಾಶಕ್ಕೆ ಮುತ್ತಿಡುವುದನು
ಕಂಡು ಮತ್ತೆ ಹಿಂದಿರುಗಿದೆ
ಅವಳ ಚಳಿಗಾಲದ ಮನೆ ಹಿತ್ತಲಿಗೆ
ಇನ್ನೊಂದು ಸಂಜೆಗೆ
ಅಗ್ಗಷ್ಟಿಕೆಯೆದುರು
ಸ್ವಲ್ಪ ಜಾಗ ಕೇಳಿ!

* ** *



ಕಂಕುಳಲ್ಲಿ
ಗಂಟು ಹಿಡಿದು
ಕಾಡು ಪಾಲಾದ
ಓಣಿ ಮುದುಕಿ
ಗೊಣಗಿಕೊಳ್ಳುತ್ತಾ
ನಡೆದಂತೆ
ಮಾತನಾಡುವವನಿಗೆ
ಪ್ರಶ್ನೆ ಬರೆದುಕೊಟ್ಟು
ಹೊರಟೆ ಬಿಟ್ಟಿರಿ ನೀವು
ಪ್ರತಿ ಸಲ
ಹುಣ್ಣಿಮೆ ಹಿಂದಿನ ರಾತ್ರಿ
ಬಂದ ತಲೆ ನೋವು
ಹೋದದ್ದು ತಿಳಿಯದಂತೆ
ಹೋಗೆ ಬಿಟ್ಟಿರಲ್ಲ ನೀವು!

No comments: